ಕುಶಾಲನಗರ, ಫೆ. 3: ಕುಶಾಲನಗರದ ಕಾವೇರಿ ಯುವಕ ಸಂಘದ ವತಿಯಿಂದ ಜಿಲ್ಲಾಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ತಾ. 23 ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅನೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪ್ರಾರಂಭವಾಗಿ 9 ವರ್ಷಗಳು ಕಳೆದಿದೆ. 2012-13ನೇ ಸಾಲಿನ ಬೆಸ್ಟ್ ಯೂತ್ ಕ್ಲಬ್ ಆಫ್ ಕೊಡಗು ಪ್ರಶಸ್ತಿಗೆ ಸಂಘ ಭಾಜನವಾಗಿದೆ. ಈ ಸಂಭ್ರಮಾಚರಣೆ ಸವಿನೆನಪಿಗಾಗಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಐಪಿಎಲ್ ಮಾದರಿಯ 3ನೇ ವರ್ಷದ ಪಂದ್ಯಾಟ ಆಯೋಜಿಸಲಾಗಿದೆ. ಪಂದ್ಯಾಟದಲ್ಲಿ ಕೇವಲ 8 ತಂಡಗಳಿಗೆ ಮಾತ್ರ ಅವಕಾಶವಿದ್ದು ಕೊಡಗಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗಿಗೆ ಮಾತ್ರ ಸೀಮಿತಗೊಳಿಸಿ ಪಂದ್ಯಾಟ ಆಯೋಜಿಸಲಾಗಿದೆ. ಪ್ರಥಮ ಬಹುಮಾನವಾಗಿ ರೂ. 50 ಸಾವಿರ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನವಾಗಿ ರು 30 ಸಾವಿರ ರೂ. ಮತ್ತು ಪಾರಿತೋಷಕ ದೊಂದಿಗೆ ಆಟಗಾರರಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು ಎಂದರು.

ಕ್ರೀಡಾಪಟುಗಳನ್ನು ಹರಾಜು ಮೂಲಕ ಆಯ್ಕೆಗೊಳಿಸುವ ಅವಕಾಶವಿದ್ದು ಪ್ರತಿಯೊಂದು ಹರಾಜು ಅರ್ಜಿಗಳನ್ನು ಜಿಲ್ಲೆಯ ತಾಲೂಕುಗಳ ಆಯಾ ಹೋಬಳಿ ವ್ಯಾಪ್ತಿಯಲ್ಲಿ ವಿತರಿಸಲಾಗುವದು. ತಂಡದ ಫ್ರಾಂಚೈಸಿ ತೆಗೆದುಕೊಳ್ಳಲು ಇಚ್ಚಿಸುವವರು ಫೆ.05 ರ ಒಳಗಾಗಿ 9620535204, 9901597097, 9964586627 ಸಂಪರ್ಕಿಸಲು ಅವರು ಕೋರಿದ್ದಾರೆ.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪ್ರದೀಪ್, ಮಧು, ಕಾರ್ಯದರ್ಶಿ ಸುಬ್ರಮಣಿ, ಸದಸ್ಯರುಗಳಾದ ಸಂತೋಷ್, ಶಿವಸ್ವಾಮಿ, ದಯಾನಂದ ಇದ್ದರು.