ಕುಶಾಲನಗರ, ಫೆ. 3: ಜನಪದ ಸಾಹಿತ್ಯ ಮೂಲಕ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ತರದ್ದಾಗಿದೆ ಎಂದು ಹಿರಿಯ ಸಾಹಿತಿ ವಿಜಯ ವಿಷ್ಣುಭಟ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪಾಲ್ಗೊಂಡು ಮಾತನಾಡಿದರು.ಅಕ್ಷರಾಭ್ಯಾಸ ಕೊರತೆಯ ಕಾಲದಲ್ಲಿ ಮಹಿಳೆಯರು ತಮಗಾದ ಅನುಭೂತಿಯನ್ನು ಕಥನಗಳಲ್ಲಿ, ಹಾಡಿನ ರೂಪದಲ್ಲಿ ಬಾಯಿಯಿಂದ ಬಾಯಿಗೆ ವರ್ಗಾಯಿಸುತ್ತಿದ್ದರು. ಈ ಮೂಲಕ ತಮ್ಮಲ್ಲಿರುವ ಸೃಜನಶೀಲತೆ ಯನ್ನು ಪ್ರಕಟಿಸಿ ಸಮಾಜಕ್ಕೆ ಮಾರ್ಗ ದರ್ಶಕರಾದರು ಎಂದು ನೆನಪಿಸಿದರು.ಜನಪದ ಸಾಹಿತ್ಯ, ಸಂಸ್ಕøತಿಯ ವಿಶ್ವಕೋಶವಾಗಿದ್ದು ದೈನಂದಿನ ಕೆಲಸ ಕಾರ್ಯಗಳು, ಮದುವೆ, ಹಬ್ಬ ಹರಿದಿನಗಳು, ಹುಟ್ಟು ಸಾವು ಪ್ರತಿಯೊಂದು ಸಂದರ್ಭ ಹಾಡುವ ವಿಧಾನಗಳಲ್ಲಿ ಪರಂಪರೆಯನ್ನು ಆಚರಿಸಿ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಭಾಷೆಯೊಂದಿಗೆ ಬದುಕು ಕಟ್ಟಿಕೊಡುವ ಇಂಗ್ಲೀಷ್ ಭಾಷೆ ಅನಿವಾರ್ಯವೂ ಆಗಿದೆ ಎಂದ ವಿಜಯ ವಿಷ್ಣುಭಟ್, ಯಾವದೇ ಸಂದರ್ಭ ಮಾತೃಭಾಷೆಯನ್ನು ಬದಿಗೊತ್ತಬಾರದು.