ಮಡಿಕೇರಿ, ಫೆ. 3: ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗೀಯ ಕಾರ್ಯಾಗಾರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಪಘಾತ ರಹಿತ ಚಾಲನೆಗಾಗಿ ಕ.ರಾ.ರ.ಸಾ. ನಿಗಮ ಮಡಿಕೇರಿ ಘಟಕದ 5 ಜನ ಚಾಲಕರುಗಳಾದ ಯು.ಸಿ. ಕಾರ್ಯಪ್ಪ, ಮಾರ್ಷಲ್ ರೋಡ್ರಿಗಸ್, ಕೆ.ಪಿ. ದಿನೇಶ, ಸಂತೋಷ ಹಾವಿನಾಳ ಮತ್ತು ಪಾಪು ಶಿವಾಯಗೋಳ ಇವರುಗಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಟ್ಟಂದೂರು ಬೆಳ್ಳಿ ಪದಕ ಪ್ರದಾನ ಮಾಡಿದರು.
ವಿಭಾಗೀಯ ಮಟ್ಟದಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಮಡಿಕೇರಿ ಘಟಕದ ತಂಡವು ವಾಲಿಬಾಲ್ ಫೈನಲ್ ಪಂದ್ಯದಲ್ಲಿ ಬಿ.ಸಿ. ರೋಡ್ ತಂಡವನ್ನು ಪರಾಭವಗೊಳಿಸಿ, ಪಂದ್ಯದಲ್ಲಿ ಜಯಗಳಿಸಿದ್ದರಿಂದ ಪ್ರಶಸ್ತಿ ನೀಡಲಾಯಿತು.
ಅಲ್ಲದೆ ಪ್ರತೀ ವರ್ಷದಂತೆ ಪುತ್ತೂರು ವಿಭಾಗದ ಘಟಕಗಳಲ್ಲಿ ನೀಡುವ ಪ್ರಶಸ್ತಿಯನ್ನು ಈ ಬಾರಿ ಅತೀ ಕಡಿಮೆ ಅಪಘಾತ ನಡೆದ ಮಡಿಕೇರಿ ಘಟಕವು ಉತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಾಗೂ ಸಂಸ್ಥೆಯ ನೌಕರರ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಮಡಿಕೇರಿ ಘಟಕ ವ್ಯವಸ್ಥಾಪಕಿ ಹೆಚ್. ಗೀತಾ, ವಿಭಾಗೀಯ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.