ಮಡಿಕೇರಿ, ಫೆ.3: ಕೊಡಗು ಜಿಲ್ಲೆಯ ಹಾಕಿ ಆಟಗಾರರು ಹಾಗೂ ಹಾಕಿ ಪ್ರೇಮಿಗಳಿಗೆ ಪ್ರಿಯವಾಗುವ ಶಾಶ್ವತವಾದ ಹಾಕಿ ಸ್ಟೇಡಿಯಂ ಸ್ಥಾಪನೆಗೆ ರಾಜ್ಯ ಸರಕಾರ ಅನುದಾನ ಕಲ್ಪಿಸುವ ಸಾಧ್ಯತೆಯಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ಅವರು ಸದನದಲ್ಲಿ ಮಂಡಿಸಲಿರುವ ಮುಂದಿನ ಮುಂಗಡ ಪತ್ರದಲ್ಲಿ ಈ ಬಗ್ಗೆ ರೂ. 10 ಕೋಟಿ ಅನುದಾನ ಒದಗಿಸುವ ನಿರೀಕ್ಷೆಯಿದೆ. ಈ ವಿಷಯವನ್ನು ರಾಜ್ಯ ಜೆಡಿಎಸ್ ಅಧ್ಯಕ್ಷರು ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರ್ರದ ಶಾಸಕರಾದ ಅಡಗೂರು ಹೆಚ್. ವಿಶ್ವನಾಥ್ ಅವರ “ಶಕ್ತಿ”ಗೆ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಕೊಡಗಿನ ನಿಯೋಗವೊಂದು ಮುಕ್ಕಾಟಿರ ಕಪ್ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುಕ್ಕಾಟಿರ ಉತ್ತಯ್ಯ, ಬಾಳುಗೋಡು ಕೊಡವ ಸಾಂಸ್ಕøತಿಕ ಕೇಂದ್ರದ ಮಾಜಿ ಅಧ್ಯಕ್ಷರುಗಳಾದ ಮಲ್ಲೇಂಗಡ ದಾದ ಬೆಳ್ಯಪ್ಪ ಹಾಗೂ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮೊದಲಾದವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿತ್ತು. ಮುಂದೆ ಬಾಳುಗೋಡುವಿನಲ್ಲಿ ನಡೆಯುವ ಮುಕ್ಕಾಟಿರ ಕಪ್ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರ ಅನುದಾನ ನೀಡುವಂತೆ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಅರಮನೆ ಮೈದಾನದಲ್ಲಿ ಭೇಟಿಯಾದ ಈ ಸಂದರ್ಭ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಅಡಗೂರು ವಿಶ್ವನಾಥ್ ಅವರೂ ಸ್ಥಳದಲ್ಲೇ ಇದ್ದರು. ವರ್ಷಂಪ್ರತಿ ಹಾಕಿ ಉತ್ಸವಕ್ಕೆ ಅನುದಾನ ನೀಡುವದಕ್ಕಿಂತ ಅಂತಾರಾಷ್ಟ್ರೀಯ ಮಟ್ಟದ ಶಾಶ್ವತ ಹಾಕಿ ಸ್ಟೇಡಿಯಂ ಸ್ಥಾಪಿಸುವದು ಉತ್ತಮ ಎಂದು ವಿಶ್ವನಾಥ್ ಅಬಿಪ್ರಾಯಪಟ್ಟರು. ಇದಕ್ಕಾಗಿ ಈ ವರ್ಷದ ರಾಜ್ಯ ಬಜೆಟ್‍ನಲ್ಲಿ ರೂ. 10 ಕೋಟಿ ಒದಗಿಸುವಂತೆ ಅವರು ದೇವೇಗೌಡ ಅವರನ್ನು ಕೋರಿದರು. ಇದರಿಂದಾಗಿ ಜಿಲ್ಲೆಯ ಎಲ್ಲ ಹಾಕಿ ಆಟಗಾರರು ಹಾಗೂ ಹಾಕಿ ಪ್ರ್ರಿಯರು ಸ್ಟೇಡಿಯಂ ಅನ್ನು ಬಳಸಲು ಅನುಕೂಲವಾಗುತ್ತದೆ. ಅಲ್ಲದೆ ಪ್ರತಿ ವರ್ಷ ನಡೆಯುವ ಕೊಡವ ಹಾಕಿಯನ್ನು ಕೂಡ ಈ ಸ್ಟೇಡಿಯಂನಲ್ಲಿ ನಡೆಸಲು ಸುಲಭವಾಗುತ್ತದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
ವಿಶ್ವನಾಥ್ ಅವರ ಮಾತನ್ನು ಮಾನ್ಯ ಮಾಡಿದ ಜೆ.ಡಿ.ಎಸ್ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಅವರು ತಕ್ಷಣವೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಬಾಳುಗೋಡುವಿನಲ್ಲಿ ಶಾಶ್ವತ ಹಾಕಿ ಸ್ಟೇಡಿಯಂ ಸ್ಥಾಪಿಸಲು ಮುಂದಿನ ಮುಂಗಡ ಪತ್ರದಲ್ಲಿ ರೂ. 10 ಕೋಟಿ ಒದಗಿಸುವಂತೆ ಸಲಹೆಯಿತ್ತರು. ಈ ಸಲಹೆಗೆ ಮುಖ್ಯಮಂತ್ರಿಯವರು ಸಮ್ಮತಿಯಿತ್ತುದಾಗಿ ವಿಶ್ಬನಾಥ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.