ನಾಪೆÇೀಕ್ಲು, ಫೆ. 3: ಕಾಳು ಮೆಣಸು ಬಳ್ಳಿಗೆ ರೋಗ ಉಂಟಾಗಿರುವ ಕಾರಣ ಜಿಲ್ಲೆಯಲ್ಲಿ ಅವದಿಗೆ ಮುಂಚೆಯೇ ಕಾಳುಮೆಣಸು ಹಣ್ಣಾಗಿದೆ. ಫಸಲು ಕುಸಿತದೊಂದಿಗೆ ತೋಟಗಳಲ್ಲಿರುವ ಎಲ್ಲಾ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ದಿನದಿಂದ ದಿನಕ್ಕೆ ಸಾಯುತ್ತಿದೆ. ಕಾಫಿ ಫಸಲು ಮತ್ತು ದರ ಕುಸಿತದ ಬೆನ್ನಲ್ಲೇ ಕಾಳು ಮೆಣಸಿನ ಉತ್ಪಾದನೆಯೂ ಗಣನೀಯವಾಗಿ ಕುಸಿದಿರುವ ಕಾರಣ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕಪ್ಪು ಬಂಗಾರವೆಂದೇ ಖ್ಯಾತಿ ಪಡೆದಿರುವ ಕಾಳು ಮೆಣಸಿಗೆ ನಾಲ್ಕು ವರ್ಷಗಳ ಹಿಂದೆ ದಾಖಲೆಯ ಬೆಲೆ ಕೆ.ಜಿ.ಗೆ 750 ರೂ. ಬಂದಿದ್ದರೂ, ಈಗ 330 ರೂ. ಗೆ ಕುಸಿದಿದೆ. ಹಿಂದಿನ ಬೆಲೆಗೆ ಹೋಲಿಸಿದರೆ ಈಗಿನ ದರ 50% ಕ್ಕಿಂತಲೂ ಕಡಿಮೆ. ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರತೀ ವರ್ಷ ಕಾಫಿಯ ಫಸಲು ಮತ್ತು ಧಾರಣೆಯಲ್ಲಿ ಏರಿಳಿತಗಳಾಗುತ್ತಿದ್ದರೂ ಕಾಳು ಮೆಣಸು ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ನೀಡುತ್ತಿದ್ದ ಕಾರಣ ತಮ್ಮ ವಾರ್ಷಿಕ ಖರ್ಚು ವೆಚ್ಚಗಳನ್ನು ಸರಿದೂಗಿಸುವಲ್ಲಿ ಅನುಕೂಲವಾಗುತ್ತಿತ್ತು. ಈ ಬಾರಿ ಜಿಲ್ಲೆಯ ಬಹುತೇಕ ತೋಟಗಳಲ್ಲಿ ಅತಿವೃಷ್ಟಿಯ ಕಾರಣದಿಂದ ಕಾಳು ಮೆಣಸು ಕೈಕೊಟ್ಟಿದೆ. ಕಳೆದ ವರ್ಷ 100 ಕೆ.ಜಿ. ಕಾಳು ಮೆಣಸು ಫಸಲು ಸಿಕ್ಕಿದ ಬೆಳೆಗಾರರಿಗೆ ಪ್ರಸಕ್ತ ವರ್ಷ 10ರಿಂದ 20 ಕೆ.ಜಿ ಮಾತ್ರ ದೊರೆಯುವ ಪರಿಸ್ಥಿತಿ ಎದುರಾಗಿದೆ.
ರೋಗ ಭಾದೆ: ಹಲವು ಬಳ್ಳಿಗಳಲ್ಲಿ ಎಲೆ ಹಾಗೂ ಕಾಳುಗಳು ನೆಲಕ್ಕೆ ಉದುರುತ್ತಿದ್ದರೆ, ಉಳಿದ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ವರ್ಷವಿಡೀ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಗೂ ವಿವಿಧ ಕೀಟನಾಶಕ ಸಿಂಪಡಿಸಿ ಬೆಳೆಸಿದ್ದ ಬೆಳೆಗಳೂ ಕೂಡ ಸಂಪೂರ್ಣವಾಗಿ ನಾಶವಾಗುತ್ತಿದೆ. ಕಾಳು ಮೆಣಸಿನ ಬಳ್ಳಿಗಳ ನಿರ್ವಹಣೆಗೆ ಹೆಚ್ಚಿನ ಖರ್ಚು ತಗಲುವದಿಲ್ಲ. ಮರಗಳಿಗೆ ಬಳ್ಳಿ ಹಬ್ಬಿಸಿ ವರ್ಷಕ್ಕೆ ಎರಡು ಸಲ ಗೊಬ್ಬರ ಹಾಕಿದರೆ ಸಾಕು. ಆದರೆ ಈ ವರ್ಷ ವಾಡಿಕೆಗಳಿಗಿಂತಲೂ ಹೆಚ್ಚಿನ ಮಳೆ ಸುರಿದಿದ್ದರೂ ಈಗಾಗಲೇ ಕಾಳು ಮೆಣಸಿನ ಬಳ್ಳಿಗಳ ಬುಡಗಳು ತೇವಾಂಶವಿಲ್ಲದೆ ಒಣಗಿವೆ. ರೋಗ ನಿಯಂತ್ರಣ ಮಾಡಿ ಬಳ್ಳಿಗಳನ್ನು ಉಳಿಸಿಕೊಳ್ಳುವದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸರಕಾರದಿಂದ ಸಹಾಯ ಹಸ್ತ: ಸರಕಾರ ನೀಡುವ ಬೆಳೆ ಪರಿಹಾರ, ಪೆÇ್ರೀತ್ಸಾಹ ಧನ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದರಿಂದ ಯಾವದೇ ಪ್ರಯೋಜನವಿಲ್ಲ. ಆದರೆ ಮೋದಿ ಸರಕಾರ ವಿಯಾಟ್ನಾಂನಿಂದ ದೇಶಕ್ಕೆ ಆಮದಾಗುತ್ತಿರುವ ಕಾಳು ಮೆಣಸು ತಡೆಗೆ ಕ್ರಮಕೈಗೊಂಡರೆ ರೈತರು ಅಲ್ಪ ಮಟ್ಟಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ ಎನ್ನುತ್ತಾರೆ ರೈತರು.
- ಪಿ.ವಿ.ಪ್ರಭಾಕರ್