ಸೋಮವಾರಪೇಟೆ, ಫೆ. 3: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಅಂಗವಾಗಿ ರೈತರಿಗೆ ಉಪಯುಕ್ತ ವಾಗುವಂತೆ ಉಚಿತ ಮಣ್ಣು ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಬೆಂಗಳೂರಿನ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟರ್ ವತಿಯಿಂದ ಸಂಚಾರಿ ಮಣ್ಣು ಪ್ರಯೋಗಾಲಯದ ಮೂಲಕ ಮಣ್ಣು ಪರೀಕ್ಷೆ ಮಾಡಿ ಉಚಿತವಾಗಿ ದೃಡೀಕರಣ ಪತ್ರ ನೀಡಲಾಗುವದು ಎಂದು ಅಭಿಯಾನಕ್ಕೆ ಚಾಲನೆ ನೀಡಿದ ಸಹಕಾರ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ತಿಳಿಸಿದರು.

ಮೊದಲಿಗೆ ಸಹಕಾರ ಸಂಘ ವ್ಯಾಪ್ತಿಯ ರೈತರಿಗೆ ಮಣ್ಣು ಪರೀಕ್ಷೆಯಿಂದ ಆಗುವ ಲಾಭಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುವದು. ನಂತರ ರೈತರು ತರುವ ಮಣ್ಣನ್ನು ಸ್ಥಳದಲ್ಲಿಯೇ ಪರೀಕ್ಷೆ ಮಾಡಿ ವರದಿ ನೀಡಲಾಗುವದು ಎಂದು ಮಂಜುನಾಥ್ ಮಾಹಿತಿ ನೀಡಿದರು. ಆರಂಭದಲ್ಲಿ ಯಲಕನೂರು ಹೊಸಳ್ಳಿ , ನೇರುಗಳಲೆ, ಅಬ್ಬೂರುಕಟ್ಟೆ, ಸೋಮವಾರಪೇಟೆ, ಬೇಳೂರು ವ್ಯಾಪ್ತಿಯಲ್ಲಿ ಪ್ರಾತ್ಯಕ್ಷತೆ ನೀಡಿ ಮಣ್ಣು ಪರೀಕ್ಷೆ ನಡೆಸಲಾಗುವದು ಎಂದ ಅವರು, ಎಲ್ಲಾ ಭಾಗದ ರೈತರೂ ಸಹ ಇದರ ಪ್ರಯೋಜನ ಪಡೆಯ ಬಹುದಾಗಿದೆ ಎಂದರು.

ಒಟ್ಟು 15 ದಿನಗಳ ಕಾಲ ಮಣ್ಣು ಪರೀಕ್ಷಾ ಅಭಿಯಾನ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮೊ: 9844285550, 7624885652 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು. ಸಂಘದ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭ ಸಂಘದ ಉಪಾಧ್ಯಕ್ಷ ಜೆ.ಜಿ. ಸುರೇಶ್, ವ್ಯವಸ್ಥಾಪಕ ರವೀಂದ್ರ, ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್, ನಿರ್ದೇಶಕ ಮೃತ್ಯುಂಜಯ, ಬೆಳೆಗಾರ ಮಲ್ಲೇಶ್, ಇಫ್ಕೋ ಸಂಸ್ಥೆಯ ಬಯೋಕೆಮೆಸ್ಟ್ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.