ಸೋಮವಾರಪೇಟೆ, ಫೆ. 2: ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣದ 15ನೇ ಸುತ್ತಿನ ಕಾರ್ಯಕ್ರಮಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕುಂಬೂರು ಸಮೀಪದ ಜಾರುಕೊಲ್ಲಿ ಗ್ರಾಮದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರದ ಯೋಜನೆಯನ್ವಯ ಪಶು ಪಾಲನಾ ಇಲಾಖೆ ಸಿಬ್ಬಂದಿಗಳು ಎಲ್ಲ ಗ್ರಾಮಗಳಿಗೆ ತೆರಳಿ ಜಾನುವಾರುಗಳಿಗೆ ಉಚಿತ ಲಸಿಕೆ ನೀಡಲಿದ್ದಾರೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಯೋಜನೆಯ ಮುಖ್ಯಸ್ಥ ಡಾ. ಆರ್. ಸಂಜೀವ್‍ಕುಮಾರ್ ಮಾತನಾಡಿ, ಕಾಲು ಬಾಯಿ ರೋಗದಿಂದ ಸಾವಿರಾರು ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.
ಈ ಕಾಯಿಲೆ ಗೊರಸುಳ್ಳ ದನ, ಎಮ್ಮೆ, ಹಂದಿ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಕಾಡುತ್ತದೆ. ಇದೊಂದು ವೈರಾಣು ರೋಗವಾಗಿದ್ದು, ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸುವದರಿಂದ ಕಾಯಿಲೆ ಹರಡದಂತೆ ಹತೋಟಿಯಲ್ಲಿಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ನಿರ್ವಹಿಸುವ ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ತಾ. 22 ರವರೆಗೆ ಲಸಿಕೆ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಹಿರಿಯ ಪರಿವೀಕ್ಷಕರಾದ ಸತ್ತಾರ್‍ಖಾನ್, ಲಿಂಗರಾಜು, ಜೀವನ್‍ಕುಮಾರ್, ಮೀನಾಕ್ಷಿ, ಸ್ವಾಮಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.