ಮಡಿಕೇರಿ, ಫೆ. 2: ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ಮತ್ತು ಬರ ನಿರ್ವಹಣೆ ಹಾಗೂ ಪುನರ್ ವಸತಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ, ಪ್ರವಾಹ ನಿರ್ವಹಣೆ ಹಾಗೂ ಪುನರ್‍ವಸತಿ ಕಾರ್ಯಗಳ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹ ಸಂದರ್ಭದಲ್ಲಿ ರಸ್ತೆ, ಸೇತುವೆ ಕಾಮಗಾರಿಗಳು, ಬೆಳೆ ಹಾನಿ, ಮನೆ ಹಾನಿ, ಪರಿಹಾರ ಸಂಬಂಧ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಪುನರ್ ವಸತಿ ಕಾರ್ಯಗಳನ್ನು ಶೀಘ್ರ ಕೈಗೊಳ್ಳುವಂತೆ ಸೂಚಿಸಿದರು.

ಬರ ನಿರ್ವಹಣೆಯಡಿ 50 ಲಕ್ಷ ರೂ. ಬಿಡುಗಡೆ ಮಾಡಬಹುದಾಗಿದ್ದು, ಈ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಅಂದಾಜು ಪಟ್ಟಿಗೆ ಅನುಮೋದನೆ ಪಡೆಯುವಂತೆ ಸೂಚನೆ ನೀಡಿದ ಅವರು, ಆಡಳಿತಾತ್ಮಕ ಅನುಮೋದನೆಗೆ ಬಾಕಿ ಇದ್ದಲ್ಲಿ ತಕ್ಷಣವೇ ಕಡತ ಸಲ್ಲಿಸುವಂತೆ ತಿಳಿಸಿದರು.

ಪ್ರಕೃತಿ ವಿಕೋಪದಡಿ ಬೆಳೆ, ಮನೆ ಹಾನಿ ಮತ್ತಿತರ ಪರಿಹಾರ ಇದುವರೆಗೆ ಅರ್ಹರ ಖಾತೆಗೆ ಜಮೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಬೇಕು. ಈ ಸಂಬಂಧ ಪರಿಶೀಲಿಸಿ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವಾಸದ ಮನೆ ಹಾನಿ, ಭಾಗಶಃ ಮನೆ ಹಾನಿಗಳಿಗೆ ಪರಿಹಾರ ಮತ್ತಿತರ ಸಂಬಂಧ ನಿಖರ ಮಾಹಿತಿ ಒದಗಿಸ ಬೇಕು. ಸಾಲ ಮನ್ನಾ ಸಂಬಂಧಿಸಿದಂತೆ ಇದುವರೆಗೆ ಬ್ಯಾಂಕುಗಳಲ್ಲಿ ನಮೂದಾಗಿರುವದು, 840 ಕುಟುಂಬಗಳಲ್ಲಿ ಎಷ್ಟು ಕುಟುಂಬಗಳಿಗೆ ಬಾಡಿಗೆ ಭರಿಸಲಾಗುತ್ತಿದೆ ಮತ್ತಿತರ ನಿಖರ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದರು.

ಬರ ಮತ್ತು ಪ್ರವಾಹ ನಿರ್ವಹಣೆ ಹಾಗೂ ಪುನರ್ ವಸತಿ ಕಾರ್ಯಗಳ ಬಗ್ಗೆ ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಯಲಿದ್ದು, ದಾಖಲೆ ಸಹಿತ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.