ಕೂಡಿಗೆ, ಫೆ. 2: ಕೂಡಿಗೆಯ ಕಾರ್ಪೋರೇಶನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ನಬಾರ್ಡ್ ಅಧಿಕಾರಿ ಎಂ.ಸಿ. ನಾಣಯ್ಯ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಉಚಿತವಾಗಿ ದೊರೆಯುವ ತರಬೇತಿ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಸ್ವ ಉದ್ಯೋಗ ಆರಂಭಿಸುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಶಿಬಿರದ ದಿನಗಳಲ್ಲಿ ದೊರೆಯುವ ಮಾಹಿತಿಗಳನ್ನು ಪಡೆದು ಉದ್ಯಮಶೀಲರಾಗಿ ಸ್ವಾವಂಲಂಬಿ ಜೀವನ ನಡೆಸುವದರೊಂದಿಗೆ ಇತರರಿಗೂ ಮಾಹಿತಿ ನೀಡಬೇಕಿದೆ ಎಂದರು. ಕಾರ್ಪೊರೇಷನ್ ಲೀಡ್ ಬ್ಯಾಂಕ್ ಮೇನೇಜರ್ ಗುಪ್ತ ಮಾತನಾಡಿ ಬ್ಯಾಂಕಿನಿಂದ ಸಾಲ ಪಡೆದ ಮೇಲೆ ಸರಿಯಾಗಿ ಮರುಪಾವತಿ ಮಾಡಬೇಕಿದೆ. ಕಾಬ್ಸೆಟ್ ಸಂಸ್ಥೆಯಿಂದ ಸ್ವ ಉದ್ಯೋಗಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಹೇಳಿದರು. ಇದರೊಂದಿಗೆ ಹೈನುಗಾರಿಕೆ ತರಬೇತಿಯ ಸಮಾರೋಪ ಸಮಾರಂಭ ಕೂಡ ನಡೆಯಿತು. 37 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಿ.ಎಂ.ಇ.ಜಿ.ಪಿಯಲ್ಲಿ 28 ಹಾಗೂ ವಿಕಲಚೇತನರ ಇ.ಡಿ.ಪಿ ಶಿಬಿರದಲ್ಲಿ 30 ಶಿಬಿರಾರ್ಥಿಗಳು ಹಾಜರಿದ್ದರು.