ಸುಂಟಿಕೊಪ್ಪ, ಫೆ. 2: ಸರಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಸರಕಾರಿ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣಾ ಕಾರ್ಯಕ್ರಮದಡಿಯಲ್ಲಿ ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.

ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜನಿ ಅವರು ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ವಿತರಿಸಿದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ ತಾಲೂಕು ಪಂಚಾಯಿತಿ ಅನುದಾನದಿಂದ ನಿರ್ಮಿಸಲಾದ ನೂತನ ಕೊಠಡಿಯನ್ನು ಲೋಕಾರ್ಪಣೆ ಮಾಡಿದರು.

ರಾಷ್ಟ್ರೀಯ ಮತದಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವತೆ ಹಾಗೂ ಹಕ್ಕುಗಳ ಮಾಹಿತಿ ನೀಡಲಾಯಿತು. ವಿದ್ಯಾರ್ಥಿ ಅತಿಥಿ ಗಣ್ಯರಿಗೆ ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನಿತ ವಹಿಸಿದ್ದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಬಸವರಾಜ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜೇಶ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ಅಂಬೆಕಲ್ ಚಂದ್ರಶೇಖರ್, ಸಹಶಿಕ್ಷಕರು ಹಾಗೂ ಪೋಷಕರು ಇದ್ದರು.