ಮಡಿಕೇರಿ, ಫೆ. 1: ಇನ್ಫೋಸಿಸ್ ಸಂಸ್ಥೆಯಿಂದ ಕೊಡಗಿನ ಸಂತ್ರಸ್ತರಿಗಾಗಿ 200 ಮನೆಗಳನ್ನು ನಿರ್ಮಿಸಿ ಕೊಡಲಾಗುವದು ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಯವರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಸಂದರ್ಭ 25 ಕೋಟಿ ರೂ. ನೆರವು ನೀಡುವದಾಗಿ ತಾನು ಘೋಷಿಸಿದ್ದೆ. ಅದರಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಾಗ ಗುರುತಿಸಿ, ಅನುಮತಿ ಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಸರ್ಕಾರದ ಯೋಜನೆಯಂತೆ ಮೊದಲ ಹಂತದಲ್ಲಿ 100, ಎರಡನೇ ಹಂತದಲ್ಲಿ 100 ರಂತೆ ಒಟ್ಟು 200 ಮನೆಗಳನ್ನು ಸರ್ಕಾರ ನೀಡಿರುವ ಜಾಗದಲ್ಲಿ ನಿರ್ಮಾಣ ಮಾಡಿಕೊಡಲಾಗುವದು.

ಪಾಲಿ ಹೌಸ್, ಕೋಳಿಗೂಡು, ಕೊಟ್ಟಿಗೆ ಹಾಗೂ ಶಿಥಿಲವಾಗಿರುವ ಮನೆಗಳನ್ನು ಕೂಡ ಸರ್ಕಾರದ ನಿಯಮಕ್ಕನುಸಾರವಾಗಿ ನಿರ್ಮಿಸಿ ಕೊಡಲು ಸಂಸ್ಥೆ ತೀರ್ಮಾನಿಸಿದೆ ಎಂದರು. ಎರಡು ಹಂತದಲ್ಲಿ 100 ಕೊಟ್ಟಿಗೆ, 100 ಕೋಳಿ ಗೂಡುಗಳನ್ನು ನಿರ್ಮಿಸಲಾಗುತ್ತದೆ. ಪ್ರಕೃತಿ ವಿಕೋಪದಿಂದ ನೊಂದಿರುವ ಕೊಡಗಿನ ಜನರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಇನ್ಫೋಸಿಸ್ ಈ ಕಾರ್ಯಕ್ಕೆ ಮುಂದಾಗಿದ್ದು, ಇದರಲ್ಲಿ ಯಾವದೇ ಸ್ವಹಿತಾಸಕ್ತಿ ಇಲ್ಲ. ಕೊಡಗಿನ ಜನತೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಸುಧಾಮೂರ್ತಿ ಮನವಿ ಮಾಡಿದರು. ಖಾಸಗಿ ಜಾಗದಲ್ಲೂ ಮನೆ ನಿರ್ಮಿಸಿಕೊಡಲು ನಾವು ಸಿದ್ಧ. ಆದರೆ ಸಂತ್ರಸ್ತ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರಿರಬೇಕೆಂದು ಹೇಳಿದರು.

ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಸಿಇಓ ಲಕ್ಷ್ಮಿಪ್ರಿಯ ಇದ್ದರು.