ನಾಪೋಕ್ಲು, ಜ. 30: ನಾಪೋಕ್ಲು ನಾಡು ಸಹಕಾರ ಸ್ಟೋರ್‍ನ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೂಲಿ ಕಾರ್ಮಿಕರು ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಪಡಿತರ ಪಡೆಯಲು ಮಾರುದ್ದದ ಸಾಲಿನಲ್ಲಿ ನಿಂತು ಅತ್ತ ಕೂಲಿ ಕೆಲಸಕ್ಕೂ ತೆರಳಲಾಗದೇ, ಇತ್ತ ಅಕ್ಕಿಯೂ ಸಿಗದೇ ಪರಿತಪಿಸುವಂತಾಗಿದೆ. ಅದೂ ಅಲ್ಲದೇ ಜನವರಿ ಕೊನೆಯ ದಿನವಾದ್ದರಿಂದ ಅಕ್ಕಿ ದೊರೆಯದಿದ್ದಲ್ಲಿ ಈ ತಿಂಗಳ ಪಡಿತರ ಖೋತಾ ಆಗುವದು ಖಂಡಿತಾ .

ಈ ಮೊದಲು ಯಾವ ರೀತಿ ಪಡಿತರ ವಿತರಿಸಲಾಗುತಿತ್ತೋ ಅದೇ ರೀತಿ ವಿತರಿಸಲು ಸರ್ಕಾರ ಆದೇಶಿಸಬೇಕು. ಹಾಗಾದಾಗ ಮಾತ್ರ ನಮ್ಮಂಥ ಬಡವರು ಉಚಿತ ಅಕ್ಕಿಯನ್ನು ಪಡೆಯಬಹುದು. ಸರ್ಕಾರದ ಅನ್ನಭಾಗ್ಯ ಯೋಜನೆಯೂ ಸಾರ್ಥಕವಾದಂತೆ ಎನ್ನುವದು ಬಡಮಂದಿಯ ಅಳಲು.

ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಲ್ಲಿ ಪ್ರಶ್ನಿಸಿದರೇ, ಸರ್ವರ್ ಪ್ರಾಬ್ಲಂನಿಂದಾಗಿ ಅನ್ನಭಾಗ್ಯದ ಉಚಿತ ಪಡಿತರವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸುತ್ತಾರೆ. ನಾಪೋಕ್ಲು ಪಟ್ಟಣದಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಪಡಿತರ ವಿತರಣೆಯಲ್ಲಾಗುವ ದುರುಪಯೋಗವನ್ನು ತಡೆಗಟ್ಟಲು ಪ್ರತಿತಿಂಗಳು ಬೆರಳಚ್ಚು ನೀಡಿಯೇ ಪಡಿತರ ಪಡೆಯಬೇಕೆಂಬ ನಿಯಮವನ್ನು ಸರ್ಕಾರ ರೂಪಿಸಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ಉಚಿತ ಪಡಿತರ ಪಡೆಯಲು ಕಳೆದ ಐದು ದಿನಗಳಿಂದ ಬರುತ್ತಿದ್ದೇನೆ. ಅದರೂ ಅಕ್ಕಿ ಸಿಗುತ್ತಿಲ್ಲ. ಕೇಳಿದರೇ ಸರ್ವರ್ ಪ್ರಾಬ್ಲಂ ಅಂತಾ ಹೇಳುತ್ತಾರೆ. ಕೆಲಸ ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ನಿಲ್ಲಬೇಕು. ಸಂಜೆ ಬಂದ ದಾರಿಗೆ ಸುಂಕವಿಲ್ಲದಂತೆ ಖಾಲಿ ಕೈಯಲ್ಲಿ ಹಿಂತೆರಳಬೇಕು. ಈ ಮೊದಲು ಯಾವ ರೀತಿ ಪಡಿತರ ವಿತರಿಸಲಾಗುತಿತ್ತೋ ಅದೇ ರೀತಿ ವಿತರಿಸಲು ಸರ್ಕಾರ ಆದೇಶಿಸಬೇಕು. ಹಾಗಾದಾಗ ಮಾತ್ರ ಬಡವರು ಉಚಿತ ಅಕ್ಕಿಯನ್ನು ಪಡೆಯಬಹುದು.

- ಕೃಷ್ಣಪ್ಪ, ಬಸ್ ಚಾಲಕ

ಅಕ್ಕಿಯನ್ನು ಪಡೆಯಲು ಕೆಲಸವನ್ನು ಬಿಟ್ಟು ಪ್ರತಿದಿನ ಕ್ಯೂ ನಿಲ್ಲಬೇಕಿದೆ. ಅದೂ ಅಲ್ಲದೇ ನಾಳೆ ತಿಂಗಳ ಕೊನೆ ದಿನ. ಅಕ್ಕಿಯನ್ನು ಪಡೆಯದಿದ್ದಲ್ಲಿ ಈ ತಿಂಗಳ ಉಚಿತ ಪಡಿತರ ಸಿಗುವದಿಲ್ಲ ಹೀಗಾದ್ದಲ್ಲಿ ಸಾರ್ವಜನಿಕರ ಸಹಕಾರದಿಂದ ಪ್ರತಿಭಟನೆ ನಡೆಸುವದೊಂದೇ ಉಳಿದಿರುವ ದಾರಿ.

- ನಾಗರಾಜ್, ಆಟೋರಿಕ್ಷಾ ಚಾಲಕ

ಉಚಿತ ಅಕ್ಕಿಯನ್ನು ಪಡೆಯಲು ಪ್ರತಿದಿನ 200 ರೂಪಾಯಿಗಳನ್ನು ಖರ್ಚುಮಾಡಿ ಬರಬೇಕಿದೆ. ಆದರೆ ಇಲ್ಲಿ ಅಕ್ಕಿ ಸಿಗದೇ ಬರಿಗೈಯೊಂದಿಗೆ ವಾಪಸ್ಸು ತೆರಳಬೇಕಿದೆ. ನಮ್ಮಂಥ ಬಡವರಿಗಾಗಿ ಇರುವ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬೇಕಿದೆ.

- ಅಕ್ಕಮ್ಮ, ಸ್ಥಳೀಯ ನಿವಾಸಿ

ಉಪನಿರ್ದೇಶಕರ ಆದೇಶದನ್ವಯ ಬಯೋಮೆಟ್ರಿಕ್ ಮೂಲಕ ಕಾನೂನು ಪ್ರಕಾರ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ. ಆದರೆ ಸರ್ವರ್ ಪ್ರಾಬ್ಲಂನಿಂದಾಗಿ ಸರಿಯಾಗಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಉಚಿತ ಪಡಿತರ ವಿತರಣೆಯಿಂದಾಗಿ ಸಹಕಾರ ಸಂಘದ ಕಾರ್ಯವೂ ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.

ತಿಮ್ಮಯ್ಯ, ವ್ಯವಸ್ಥಾಪಕರು,

ನಾಪೋಕ್ಲು ನಾಡು ಸಹಕಾರ ಸ್ಟೋರ್