ಮಡಿಕೇರಿ, ಜ. 30: ಮಡಿಕೇರಿ ನಗರಸಭೆಯ 2019-20ನೇ ಸಾಲಿನ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಸಂಬಂಧ ಸಾರ್ವಜನಿಕ ರಿಂದ ಸಲಹೆ ಸೂಚನೆ ಪಡೆಯಲು ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭೆ ವತಿಯಿಂದ ಆಯೋಜಿಸ ಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಾಗರಿಕರು ಮಡಿಕೇರಿ ನಗರದ ಅಭಿವೃದ್ಧಿ ಸಂಬಂಧ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಾರ್ವಜನಿಕರಿಂದ ವ್ಯಕ್ತಗೊಂಡ ಸಲಹೆಗಳಿಗೆ ಮನ್ನಣೆ ನೀಡುವದಾಗಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದರು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಮಾತನಾಡಿ, ಮಡಿಕೇರಿ ನಗರದ ವಿವಿಧ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸುವಂತೆ ಕೋರಿದರು. ರಾಜಕಾಲುವೆಗಳ ಎರಡೂ ಬದಿ ತಡೆಗೋಡೆ ನಿರ್ಮಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ಸೇತುವೆಗಳ ಅಭಿವೃದ್ಧಿ ಯೋಜನೆ ತಯಾರಿಸಬೇಕು. ಪಂಪ್ ಕೆರೆಯಲ್ಲಿ ನೀರು ಸಂಗ್ರಹ ಮಾಡಲು ಮುಂದಾಗಬೇಕು. ನಗರಸಭಾ ಜಂಕ್ಷನ್‍ನಿಂದ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಕೆಲವೆಡೆ ರಸ್ತೆ ಕುಸಿಯುವ ಹಂತದಲ್ಲಿದ್ದು, ತಡೆಗೋಡೆ ನಿರ್ಮಿಸಿ ಅದನ್ನು ದುರಸ್ತಿಪಡಿಸುವಂತೆ ಸಲಹೆಯಿತ್ತರು. ಕಸವಿಲೇವಾರಿ ಹಾಗೂ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಮೂಲಕ ನಗರದ ಸ್ವಚ್ಛತೆಗೆ ಒತ್ತು ನೀಡುವಂತೆ ಮನವಿ ಮಾಡಿದರು.

ಉಷಾ ಎಂಬವರು ಮಾತನಾಡಿ, ಹೋಂಸ್ಟೇ ಹಾಗೂ ಮನೆಗಳಲ್ಲಿ ನೀರನ್ನು ವಿನಾಃಕಾರಣ ಪೋಲು ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ನಗರ ವ್ಯಾಪ್ತಿ ಶುಚಿತ್ವಕ್ಕೆ ನಗರಸಭೆ ಮೊದಲು ಆದ್ಯತೆ ನೀಡಬೇಕೆಂದರು. ಪಾಲಿ ಮಾದಪ್ಪ ಎಂಬವರು ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಬಸ್ ಸಂಚಾರ ಹೆಚ್ಚಾದರೆ ನಾಗರಿಕರಿಗೆ ನಡೆದಾಡಲು ತೊಂದರೆಯಾಗಲಿದೆ. ಆದ್ದರಿಂದ ರಸ್ತೆ ಬದಿ ಫುಟ್‍ಪಾತ್ ನಿರ್ಮಾಣ ಮಾಡಲು ನಗರಸಭೆ ಕ್ರಮಕೈಗೊಳ್ಳಬೇಕೆಂದರು. ಎಂ.ಎ. ರಾಜಾ ಎಂಬವರು ಮಾತನಾಡಿ, ಜಯನಗರದಲ್ಲಿರುವ ಕೆರೆಯ ಹೂಳೆತ್ತಬೇಕು. ಜಿ.ಟಿ. ವೃತ್ತದ ಬಳಿ ರಸ್ತೆಗೆ ರಿಫ್ಲೆಕ್ಟರ್‍ಗಳನ್ನು ಅಳವಡಿಸಿ ಅಪಘಾತಗಳನ್ನು ತಪ್ಪಿಸಬೇಕು. ನಗರದ ಎಲ್ಲಾ ಪ್ರದೇಶಗಳ ಹೆಸರಿನ ನಾಮ ಫಲಕವನ್ನು ಆಯಾ ಪ್ರದೇಶಗಳ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಸ್ಥಳೀಯ ರಿಗೂ, ಪ್ರವಾಸಿಗರಿಗೂ ಅನುಕೂಲ ಕಲ್ಪಿಸಲು ನಗರಸಭೆ ಮುಂದಾಗಬೇಕು. ವಾಹನಗಳ ಪಾರ್ಕಿಂಗ್‍ಗೆ ಸೂಕ್ತ ಸ್ಥಳ ನಿಗದಿಮಾಡ ಬೇಕು ಎಂದು ಸಲಹೆ ನೀಡಿದರು.

ತೆನ್ನಿರಾ ಮೈನಾ ಮಾತನಾಡಿ, ಪ್ರಸ್ತುತ ಕಸ ವಿಲೇವಾರಿ ಮಾಡುತ್ತಿರುವ ಜಾಗ ಎತ್ತರದಲ್ಲಿದ್ದು, ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪರ್ಯಾಯ ಜಾಗವೊಂದನ್ನು ಗುರುತಿಸಿ ತಳಮಟ್ಟ ದಲ್ಲಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳು ವಂತಾಗಬೇಕೆಂದರು. ಪ್ರದೀಪ್ ಎಂಬವರು ಮಾತನಾಡಿ, ನಗರಸಭೆಗೆ ಒಳಪಡುವ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ತಾತ್ಕಾಲಿಕ ಶಿಕ್ಷಕರಿಗೆ ವೇತನ ಒದಗಿಸಲು ನಗರಸಭೆ ಬಜೆಟ್‍ನಲ್ಲಿ ಹಣವನ್ನು ಮೀಸಲಿಡಬೇಕು. ನಗರಸಭಾ ಶಾಲಾ ಕೊಠಡಿಗಳ ದುರಸ್ತಿಗೂ ಹಣ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ನಗರಸಭಾ ಆಯುಕ್ತ ರಮೇಶ್, ಸದಸ್ಯರುಗಳಾದ ಲಕ್ಷ್ಮಿ, ಶ್ರೀಮತಿ ಬಂಗೇರ, ಜುಲೇಕಾಬಿ, ಪೀಟರ್, ಉಸ್ಮಾನ್ ಹಾಗೂ ನಗರಸಭಾ ಸಿಬ್ಬಂದಿ ಇದ್ದರು.