ಪೊನ್ನಂಪೇಟೆ: ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ರಾಜ್ಯಶಾಸ್ತ್ರ ವಿಭಾಗದಿಂದ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಪಿ.ಡಿ.ಓ. ಚಂದ್ರಮೌಳಿ ಮತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತಾ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸೀತಮ್ಮ, ವನಿತ್‍ಕುಮಾರ್ ಉಪಸ್ಥಿತರಿದ್ದರು.ವೀರಾಜಪೇಟೆ: ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಲಾಯಿತು. ಈ ಸಂದರ್ಭ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ. ಅಪ್ಪಾಜಿ ಗೌಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ವೇಣುಗೋಪಾಲ, ವನಿತ್‍ಕುಮಾರ್ ಹಾಗೂ ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಹಿಸಿ ಮಾತನಾಡಿ, ಮತದಾನ ಮಾಡುವದು ಪ್ರತಿಯೊಬ್ಬರ ಪವಿತ್ರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿತು ಕೊಂಡು ಇತರರಿಗೂ ಮತದಾನ ಬಗ್ಗೆ ತಿಳಿಹೇಳಬೇಕು. ಮತದಾನದಲ್ಲಿ ಬಾಗವಹಿಸದೆ ಇರುವದು ನಾಗರಿಕನ ಲಕ್ಷಣವಲ್ಲ ಜಾತಿ ಧರ್ಮ ಕುಲ ಮತ ಅವುಗಳನ್ನು ಪರಿಗಣಿಸದೇ ಯೋಗ್ಯ ಅಭ್ಯರ್ಥಿಗೆ ಮತವನ್ನು ಹಾಕುವದರಿಂದ ದೇಶದ ನಾಳಿನ ಭವಿಷ್ಯದ ದೃಷ್ಟಿಯಿಂದ ಒಳಿತು ಎಂದರು.

ಉಪನ್ಯಾಸಕ ಪಿ. ಸೋಮಚಂದ್ರ ಮಾತನಾಡಿ, ದೇಶದ ಅಭಿವೃದ್ಧಿಗೆ ಸುಭದ್ರ ಮತ್ತು ಸ್ಥಿರ ಸರಕಾರದ ಅವಶ್ಯಕತೆಯಿದೆ. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. 18 ವರ್ಷ ತುಂಬಿದ ನಂತರ ತಮ್ಮ ಹೆಸರನ್ನು ನೋಂದಾಯಿಸಿ ಚುನಾವಣಾ ಗುರುತಿನ ಚೀಟಿ ಪಡೆದು ಕೊಳ್ಳಬೇಕು ಎಂದರು.

ಉಪನ್ಯಾಸಕ ಬೆಳ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಸ್.ಹೆಚ್. ಈಶ ಮಕ್ಕಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ವೇದಿಕೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ವೈ.ಎಂ. ಕರುಂಬಯ್ಯ, ಉಪನ್ಯಾಸಕಿಯರಾದ ಜಯಶ್ರೀ, ಕವಿತಾಭಕ್ತ್, ಪದ್ಮಾವತಿ, ಮಂಜುಳಾ, ಕಾವ್ಯ, ಕನಕಲಕ್ಷ್ಮಿ, ಸುಕನ್ಯಾ ಉಪನ್ಯಾಸಕ ಫಿಲಿಫ್ವಾಸ್, ಉಪಸ್ಥಿತರಿದ್ದರು.ಶನಿವಾರಸಂತೆ: ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕ ವೃಂದದ ವರಿಗೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಪ್ರತಿಜ್ಞಾವಿಧಿ ಭೋದಿಸಿದರು. ಕಾಲೇಜಿನ ಪ್ರಾಂಶುಪಾಲ ಇ.ಎಂ ದಯಾನಂದ್ ಮುಂತಾದವರಿದ್ದರು.

ಶನಿವಾರಸಂತೆ: ವಿಘ್ನೇಶ್ವರ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಶಿವಪ್ರಕಾಶ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ವಿದ್ಯಾಸಂಸ್ಥೆಯ ನಿರ್ದೇಶಕಿ ನಿತ್ಯಾನಿಧಿಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಇಲ್ಲಿನ ಅಂಬೇಡ್ಕರ್ ಸಂಘದ ವತಿಯಿಂದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶದ ಆಡಳಿತ ವ್ಯವಸ್ಥೆಯಲ್ಲಿನ ಸಂವಿಧಾನ ರಚಿಸಿದ ಇಂತಹ ಮಹಾನ್ ವ್ಯಕ್ತಿಯನ್ನು ಈ ದಿನದಲ್ಲಿ ಸ್ಮರಿಸುವದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು ಕಾನೂನಿಗೆ ಎಲ್ಲರೂ ತಲೆದೂಗ ಬೇಕು ಎಂದರು. ಈ ಸಂದರ್ಭ ಅಂಬೇಡ್ಕರ್ ಸಂಘದ ಉಪಾಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಹೆಚ್.ಎಂ. ನರಸಿಂಹ, ಖಜಾಂಚಿ ಜಯಣ್ಣ, ಸಹ ಕಾರ್ಯದರ್ಶಿ ರವಿಶಂಕರ್, ಗೌರವ ಅಧ್ಯಕ್ಷ ಅರುಣ್‍ಕುಮಾರ್, ಸದಸ್ಯರಾದ ಸುರೇಶ್, ಮಂಜುನಾಥ್, ಸುನಿಲ್, ರಾಮಚಂದ್ರ, ನಾರಾಯಣ, ವೀರಭದ್ರ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.