ಕುಶಾಲನಗರ, ಜ. 29: ಮಾನಸಿಕ ಸ್ಥಿಮಿತ ಕಳೆದುಕೊಂಡು ಸಂವಿಧಾನದ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರನ್ನು ನರೇಂದ್ರ ಮೋದಿ ಕೂಡಲೆ ತಮ್ಮ ಮಂತ್ರಿ ಮಂಡಲದಿಂದ ಕೈಬಿಡಬೇಕಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಯುವತಿಯರ ಮೈಮುಟ್ಟಿರದೆ ಅಂತಹವರ ಕೈ ಕಡಿಯಿರಿ ಎಂದು ಪ್ರಚೋದಿಸುವ ಮೂಲಕ ಸಮಾಜದಲ್ಲಿ ವಿಪ್ಲವ ಉಂಟುಮಾಡಿದ್ದಾರೆ. ಇಂತಹ ಅನೇಕ ವಿವಾದಾತ್ಮಕ ಹೇಳಿಕೆಗಳ ಮೂಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯತೆಯ ಘನತೆಗೆ ಚ್ಯುತಿ ಉಂಟುಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಓರ್ವ ಮಂತ್ರಿಯಾಗಿ ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆಗೆ ಒತ್ತು ನೀಡಬೇಕಾದ ಅನಂತಕುಮಾರ್ ಹೆಗಡೆ ರೌಡಿ ಮಾದರಿಯಲ್ಲಿ ವರ್ತಿಸುತ್ತಿರುವದು ಶೋಭೆಯಲ್ಲ ಎಂದರು.
ದೇಶದಲ್ಲಿ ಅಂತರ್‍ಧರ್ಮೀಯ ಮದುವೆಗಳು ಹೆಚ್ಚು ನಡೆಯುತ್ತಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮಗಳ ನಡುವೆ ಅನ್ಯೋನತೆಗೆ ಒತ್ತು ನೀಡುವಂತಹ ವರ್ತನೆಯನ್ನು ಅನಂತ್‍ಕುಮಾರ್ ಮೈಗೂಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಕೇಂದ್ರದ ಮಂತ್ರಿ ಮಂಡಲದಿಂದ ಅನಂತ್‍ಕುಮಾರ್ ಅವರನ್ನು ಕೈಬಿಡಬೇಕು ಹಾಗೂ ರಾಜ್ಯ ಸರಕಾರ ಕೂಡಲೆ ಅನಂತ್‍ಕುಮಾರ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ ಶಶಿಧರ್, ಅನಂತಕುಮಾರ್ ಹೇಳಿಕೆ ಖಂಡಿಸಿ 30 ರಂದು (ಇಂದು) ಸಂಜೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕುಡಾ ಮಾಜಿ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಮುಖಂಡರಾದ ಕೆ.ಕೆ. ಮಂಜುನಾಥ್‍ಕುಮಾರ್, ಆರ್.ಕೆ. ನಾಗೇಂದ್ರಬಾಬು, ಪ್ರಮುಖ ಶಾಜಿ ಇದ್ದರು.
ಕಾಂಗ್ರೆಸ್ ಖಂಡನೆ
ಮಡಿಕೇರಿ : ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಂತಹ ಮಾತನಾಡುವ ಗೊಂಬೆಗಳನ್ನು ಎದುರಿಗೆ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ರಾಜಕೀಯ ಬೇಳೆ ಬೇಯಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಟೀಕಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮಂಜುನಾಥ್ ಕುಮಾರ್ ಮಾದಾಪುರದಲ್ಲಿ ಕೇಂದ್ರ ಸಚಿವರು ಇತ್ತೀಚಿಗೆ ನೀಡಿರುವ ಹೇಳಿಕೆಯನ್ನು ಖಂಡಿಸುವದಾಗಿ ತಿಳಿಸಿದ್ದಾರೆ.
ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಅನಂತಕುಮಾರ ಹೆಗಡೆ ಅವರು ಪ್ರತಿಬಾರಿ ಹವಣಿಸುತ್ತಿದ್ದು, ಇವರು ನೀಡಿರುವ ಹೇಳಿಕೆ ಅನಾಗರಿಕತೆಯಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಈ ದೇಶದ ಮಹಾ ಧರ್ಮಗ್ರಂಥವಾಗಿರುವ ಸಂವಿಧಾನವನ್ನೇ ಕೀಳಾಗಿ ಕಾಣುವ ಮನೋಸ್ಥಿತಿಯ ಅನಂತಕುಮಾರ ಹೆಗಡೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಇವರ ವರ್ತನೆ ದೇಶ ದ್ರೋಹದಷ್ಟೇ ಅಪಾಯಕಾರಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವವನ್ನು ನೀಡದೆ ಅತೀರೇಕದ ವರ್ತನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಒಗ್ಗಟ್ಟಿನ ವ್ಯವಸ್ಥೆಗೆ ಕಳಂಕವಾಗಿರುವ ಅನಂತಕುಮಾರ ಹೆಗಡೆ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವೈಯುಕ್ತಿಕ ಬದುಕಿನ ಬಗ್ಗೆಯೂ ಕೀಳಾಗಿ ಮಾತನಾಡಿರುವ ಕೇಂದ್ರ ಸಚಿವರು ಮುಸ್ಲಿಂ ಹೆಣ್ಣಿನ ಹಿಂದೆ ಹೋಗಿದ್ದೇ ಸಾಧನೆ ಎಂದು ಹೇಳುವ ಮೂಲಕ ತಮ್ಮ ಘನತೆ ಏನು ಎನ್ನುವದನ್ನು ಜನತೆಗೆ ತೋರ್ಪಡಿಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವದಲ್ಲದೆ ಕ್ಷಮೆ ಕೋರಬೇಕೆಂದು ಒತ್ತಾಯಿಸುವದಾಗಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಘಟಕ ಟೀಕೆ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದು, ಇವರ ಹೇಳಿಕೆಗಳು ಸಂವಿಧಾನದ ಆಶಯಗಳು ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸಚಿವರು ಇತ್ತೀಚಿಗೆ ಮಾದಾಪುರದಲ್ಲಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಪ್ರಕೃತಿ ವಿಕೋಪ ಸಂಭವಿಸಿದಾಗ ಜಾತಿ, ಮತ, ಭೇದ ಮರೆತು ಎಲ್ಲಾ ಮನಸ್ಸುಗಳು ಒಗ್ಗಟ್ಟಾಗಿ ಸಂತ್ರಸ್ತರ ನೋವಿಗೆ ಸ್ಪಂದಿಸಿವೆ.
ಮಾದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜವಬ್ದಾರಿಯುತ ಸಚಿವ ಸ್ಥಾನದಲ್ಲಿದ್ದ ಅನಂತಕುಮಾರ ಹೆಗಡೆ ಅವರು ಸಮಾಜವನ್ನು ಒಗ್ಗೂಡಿಸುವ ಮಾತುಗಳನ್ನಾಡಬೇಕಾಗಿತ್ತು. ಆದರೆ ನೋವು, ನಲಿವುಗಳಿಗೆ ಸ್ಪಂದಿಸುತ್ತಿರುವ ಮನಸ್ಸುಗಳನ್ನು ವಿಭಜಿಸುವ ಯತ್ನವನ್ನು ಅವರು ಮಾಡಿದ್ದಾರೆ ಎಂದು ಯಾಕುಬ್ ಆರೋಪಿಸಿದ್ದಾರೆ.