ಕುಶಾಲನಗರ, ಜ. 28: ಕೊಡಗಿನ ಉದಯೋನ್ಮುಖ ಯುವ ನಟಿ ಸಿಂಚನ ಚಂದ್ರಮೋಹನ್ ನಟಿಸಿರುವ ಚೊಚ್ಚಲ ಸಿನಿಮಾ ‘ಅವಲಕ್ಕಿ ಪವಲಕ್ಕಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಶನಿವಾರ ಮೈಸೂರಿನಲ್ಲಿ ನಡೆಯಿತು. ರಂಗಭೂಮಿ ಕಲಾವಿದ ಉದಯಕುಮಾರ್, ನಿರ್ದೇಶಕ ಬಾಲರಾಜ್ ವಾಟಿ, ನಿರ್ಮಾಪಕ ಪ್ರವೀಣ್ ಕೃಪಾಕರ್, ರೇವಣ್ಣ ನಾಯಕ್ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿದರು.

ಮೈಸೂರಿನ ಪ್ರಣವ ಪಿಕ್ಚರ್ಸ್ ಲಾಂಛನದಡಿಯಲ್ಲಿ ರಂಜಿತಾ ಸುಬ್ರಮಣ್ಯ ನಿರ್ಮಿಸಿ, ದುರ್ಗಪ್ರಸಾದ್ ನಿರ್ದೇಶಿಸಿರುವ ಚಿತ್ರ ಬುಡಕಟ್ಟು ಸಮುದಾಯದ ಕಥೆಯನ್ನು ಒಳಗೊಂಡಿದೆ.

ಚಿತ್ರಕ್ಕೆ ಜುಬಿನ್ ಪಾಲ್ ಸಂಗೀತ ನೀಡಿದ್ದು, ನಾಯಕನಾಗಿ ದೀಪಕ್ ಪಟೇಲ್, ನಾಯಕಿಯಾಗಿ ಸಿಂಚನಾ ಚಂದ್ರಮೋಹನ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಿಂಚನಾ ಮಾನವಶಾಸ್ತ್ರಜ್ಞ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕುಶಾಲನಗರದ ಪತ್ರಕರ್ತ ಚಂದ್ರಮೋಹನ್ ಮತ್ತು ವನಿತಾ ದಂಪತಿಗಳ ಪುತ್ರಿ ಸಿಂಚನಾ ಪತ್ರಿಕೋದ್ಯಮ ಪದವಿ ಪಡೆದು ಕೆಲ ಸಮಯ ರಾಜ್ಯಮಟ್ಟದ ದೃಶ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಕಣ್ಮಣಿ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸ್ತುತ ನನ್ ಹೆಂಡ್ತಿ ಎಂಬಿಬಿಎಸ್ ಧಾರವಾಹಿ ಚಿತ್ರೀಕರಣ ನಡೆಯುತ್ತಿದ್ದು ಇದರಲ್ಲಿ ಸಿಂಚನಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸಿಂಚನಾ ಒಟ್ಟು ಮೂರು ಧಾರವಾಹಿ ಮತ್ತು ಎರಡು ಸಿನಿಮಾಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪು ಮೂಡಿಸುವದರೊಂದಿಗೆ ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.