ಒಡೆಯನಪುರ, ಜ. 27: ‘ಆಂಗ್ಲ ಭಾಷಾ ಪ್ರಾಬಲ್ಯ ಮತ್ತು ಪಾಶ್ಚ್ಯಿಮಾತ್ಯ ಸಂಸ್ಕøತಿಯ ವ್ಯಾಮೋಹದಿಂದ ಜಾನಪದ ಸಾಹಿತ್ಯ ಬೆಳವಣಿಗೆಯಲ್ಲಿ ಹಿನ್ನಡೆಯಾಗುತ್ತಿದ್ದು, ಕನ್ನಡ ಭಾಷಾ ಬೆಳವಣಿಗೆಗೂ ಪರಿಣಾಮ ಬೀರುತ್ತಿದೆ’ ಎಂದು ಕೊಡ್ಲಿಪೇಟೆ ವಿದ್ಯಾಸಂಸ್ಥೆ ಶಿಕ್ಷಕ ಕೆ.ಎಸ್. ಕಿರಣ್‍ಕುಮಾರ್ ಅಭಿಪ್ರಾಯಪಟ್ಟರು. ಊರುಗುತ್ತಿ-ಖ್ಯಾತೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆಯುತ್ತಿರುವ ವಾರ್ಷಿಕ ಶಿಬಿರದ ಸಂಪನ್ಮೂಲ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಾನಪದ ಮೂಲ ಸಾಹಿತ್ಯವಾಗಿದ್ದು, ಜಾನಪದ ಸಾಹಿತ್ಯದ ಗಟ್ಟಿತನದಿಂದ ಕನ್ನಡ ಭಾಷಾ ಬೆಳವಣಿಗೆಯಾಗುತ್ತಿತ್ತು ಆದರೆ ಪ್ರಸ್ತುತ ಆಂಗ್ಲ ಭಾಷೆ ಮತ್ತು ಪಾಶ್ಚ್ಯಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ಜಾನಪದ ಸಾಹಿತ್ಯ ಬೆಳವಣಿಗೆಯಾಗುತ್ತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾಸಂಸ್ಥೆ ನಿರ್ದೇಶಕ ಕೆ.ಬಿ. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಪಾಲ್ಗೊಳ್ಳುವಿಕೆಯಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ, ಶಿಬಿರದಲ್ಲಿ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ನಿರ್ದೇಶಕ ಡಿ.ವಿ. ಹರೀಶ್, ಪ್ರಮುಖರಾದ ಪಟೇಲ್ ವಿಶ್ವನಾಥ್, ಎಚ್.ಎಂ. ಲೋಕೇಶ್, ಮೋಹನ್, ಯತೀಶ್, ಶಿಬಿರಾಧಿಕಾರಿ ಕೆ.ಎಚ್. ಯೋಗೇಂದ್ರ, ಉಪನ್ಯಾಸಕಿ ಪವಿತ್ರ ಮುಂತಾದವರು ಹಾಜರಿದ್ದರು.