ಶನಿವಾರಸಂತೆ, ಜ. 27: ಸೈಬರ್ ಅಪರಾಧಗಳು, ಆರ್ಥಿಕ ಅಪರಾಧಗಳು ಮಾದಕ ವಸ್ತುಗಳ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಸಂದೇಶ ಬಳಕೆಯನ್ನು ತಡೆಗಟ್ಟಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಮಹಿಳಾ ದೌರ್ಜನ್ಯ ತಡೆ ವಿಚಾರದ ಬಗ್ಗೆ ಅರಿವು ಮೂಡಿಸಲಾಯಿತು. ಶನಿವಾರಸಂತೆ ಭಾರತೀ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿ - ವಿದ್ಯಾರ್ಥಿಗಳಿಗೆ ಸ್ಥಳೀಯ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್.ಪಿ. ಪಿ.ಕೆ. ಮುರಳೀಧರ್ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.

ಸ್ಮಾರ್ಟ್ ಫೋನ್‍ಗಳಿಂದ ಉಪಯೋಗಕ್ಕಿಂತ ಅನಾನುಕೂಲತೆಗಳೇ ಹೆಚ್ಚಾಗಿದೆ. ವಿದ್ಯಾರ್ಥಿಗಳು ಅನಗತ್ಯ ಮೆಸೇಜ್ ಕಳುಹಿಸುವದು, ವ್ಯಕ್ತಿಗಳ ಬಗ್ಗೆ, ಸಂಘಟನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್. ಆದರೆ ಮುಂದಿನ ನಿಮ್ಮ ಜೀವನಕ್ಕೆ ಅನಾನುಕೂಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರುವದು ಒಳ್ಳೆಯದು.

ಮಾದಕ ವಸ್ತುಗಳನ್ನು ಬಳಸಿದರೆ ಪೊಲೀಸ್ ಕೇಸು ದಾಖಲಾಗುತ್ತದೆ. ಮಹಿಳಾ ದೌರ್ಜನ್ಯದ ಬಗ್ಗೆ ಹಾಗೂ ಕಾನೂನಿನ ಬಗ್ಗೆ ಉದಾಹರಣೆಗಳ ಸಹಿತ ವಿವರಣೆ ನೀಡಿದರು. ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಮಾತನಾಡಿದರು.

ಈ ಸಂದರ್ಭ ಇತ್ತೀಚೆಗೆ ದೈವಾಧೀನರಾದ ಶಿವಕುಮಾರ ಸ್ವಾಮಿ ಅವರಿಗೆ ಗೌರವ ಸೂಚಿಸಲಾಯಿತು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ಅನಿವ್ಯ ಪ್ರಾರ್ಥಿಸಿ, ಕಾಲೇಜಿನ ಪ್ರಾಂಶುಪಾಲ ದಯಾನಂದ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಹರೀಶ್ ಕಾರ್ಯಕ್ರಮ ನಿರೂಪಣೆ ಮಾಡಿ, ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್.ಆರ್. ವಿವೇಕ್ ವಂದಿಸಿದರು.