ಮಡಿಕೇರಿ, ಜ. 27: ನಗರದ ದಾಸವಾಳ ಬೀದಿಯ ಮಡಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ 22 ಅಡಿ ಎತ್ತರದ ಶ್ರೀ ವೀರಭದ್ರ ಪ್ರತಿಮೆ ಹಾಗೂ ಶ್ರೀಮುನೀಶ್ವರ ವೀರಭದ್ರ ಮೂರ್ತಿಗಳ ಪ್ರತಿಷ್ಠಾಪನಾ ಉತ್ಸವವು ಇಂದು ದೈವಿಕ ವಿಧಾನಗಳೊಂದಿಗೆ ನೆರವೇರಿತು. ಕೇರಳದ ಗೋಪಾಲಕೃಷ್ಣ ನಂಬೂದರಿ ಅವರು ವೀರಭದ್ರ ಪ್ರತಿಮೆ ಲೋಕಾರ್ಪಣೆಯೊಂದಿಗೆ ಧಾರ್ಮಿಕ ಕೈಂಕರ್ಯ ನಡೆಸಿಕೊಟ್ಟರು.

ಈ ನಿಮಿತ್ತ ನಿನ್ನೆ ಸಂಜೆಯಿಂದ ಸಾಮೂಹಿಕ ಪ್ರಾರ್ಥನೆ, ಗೋಪೂಜೆ, ಪುಣ್ಯಾಹ, ಬಿಂಬ ಪೂಜೆ, ಶುದ್ಧಿ ಕಾರ್ಯ, ವಾಸ್ತು ರಕ್ಷೋಘ್ನ ಹೋಮ ಇತ್ಯಾದಿ ನೆರವೇರಿತು. ಇಂದು ಬೆಳಿಗ್ಗೆ ಶಕ್ತಿ ಗಣಪತಿ ಹೋಮ, ಪ್ರತಿಷ್ಠಾಪೂಜೆ, ಕಲಶಪೂಜೆ, 9.45ಕ್ಕೆ ಶ್ರೀ ವೀರಭದ್ರ ಪ್ರಾಣ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಮಹಾ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.

ಸಂಜೆ ದೇವತಾ ಕೈಂಕರ್ಯದೊಂದಿಗೆ ವಿಶೇಷ ಮಹಾ ಪೂಜೆ, ಶ್ರೀ ಮುನೀಶ್ವರ, ವೀರಭದ್ರ ದೇವರಿಗೆ ಭಷ್ಮಾಭಿಷೇಕ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿ ಪದಾಧಿಕಾರಿಗಳೊಂದಿಗೆ ಭಕ್ತರು ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪಿ.ಜಿ. ಕಮಲ್ ತಂಡ ಪೂಜಾ ಕೈಂಕರ್ಯ ಹಾಗೂ ಸಮಿತಿ ಅಧ್ಯಕ್ಷ ಸುಕುಮಾರ್ ಮೊದಲಾದವರು ನೇತೃತ್ವ ವಹಿಸಿದ್ದರು.