ಚೆಟ್ಟಳ್ಳಿ, ಜ. 27: ಇಲ್ಲಿನ ಪ್ರೌಢ ಶಾಲಾ ಮೈದಾನದಲ್ಲಿ ಕೆ.ಕೆ.ಎಫ್.ಸಿ ಫುಟ್ಬಾಲ್ ಕ್ಲಬ್ ವತಿಯಿಂದ ನಡೆದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ವಿಜಯನಗರ ಎಫ್.ಸಿ ತಂಡವು , ಬಿ.ಎಸ್.ಎ ಕುಂದಾ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ವಿಜಯನಗರ ಎಫ್.ಸಿ ಮೈಸೂರು ಹಾಗೂ ಅಂಬೇಡ್ಕರ್ ಯೂತ್ ಕ್ಲಬ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು.
ವಿಜಯನಗರ ಎಫ್.ಸಿ ತಂಡವು 2-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಬಿ.ಎಸ್.ಎ. ಕುಂದಾ ಹಾಗೂ ಸಿ.ಸಿ ಎಫ್.ಸಿ ಕಾಫಿ ಬೋರ್ಡ್ ತಂಡಗಳ ನಡುವೆ ನಡೆಯಿತು.
ಬಿ.ಎಸ್.ಎ. ಕುಂದಾ ತಂಡವು 4-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.
ತೃತೀಯ ಸ್ಥಾನಕ್ಕಾಗಿ ಸೆಮಿಫೈನಲ್ ನಲ್ಲಿ ಪರಾಭವಗೊಂಡ ಸಿ.ಸಿ.ಎಫ್.ಸಿ ಹಾಗೂ ಅಂಬೇಡ್ಕರ್ ಅಮ್ಮತ್ತಿ ತಂಡಗಳ ನಡುವೆ ಪಂದ್ಯಾಟ ನಡೆಯಿತು.
ಸಿ.ಸಿ.ಎಫ್.ಸಿ ಕಾಫಿ ಬೋರ್ಡ್ ತಂಡವು 2-0 ಗೋಲುಗಳ ಅಂತರದಿಂದ ಅಂಬೇಡ್ಕರ್ ತಂಡವನ್ನು ಮಣಿಸಿ ತೃತೀಯ ಸ್ಥಾನವನ್ನು ಪಡೆಯಿತು.
ಜಿಲ್ಲೆಯ ಎರಡು ಮಹಿಳಾ ತಂಡದ ಪ್ರದರ್ಶನ ಪಂದ್ಯದಲ್ಲಿ ಜಿಲ್ಲಾ ಸೋಕರ್ ವುಮೆನ್ಸ್ ಫುಟ್ಬಾಲ್ ಕ್ಲಬ್, ಗೋಣಿಕೊಪ್ಪಲಿನ ತಂಡವನ್ನು ಮಣಿಸಿ ಜಯಗಳಿಸಿತು.
ಪಂದ್ಯಾಟದ ಅತ್ಯುತ್ತಮ ಆಟಗಾರನಾಗಿ ಅಂಬೇಡ್ಕರ್ ತಂಡದ ಪೆರೇರಾ, ಟಾಪ್ ಸ್ಕೋರರ್ ಆಗಿ ಕುಂದಾ ತಂಡದ ಚಿಡಿ, ಬೆಸ್ಟ್ ಗೋಲ್ ಕೀಪರ್ ಕುಂದಾ ತಂಡದ ದಿಲ್ಶಾದ್, ಫಿಟ್ನೆಸ್ ಆಟಗಾರನಾಗಿ ಸಿ.ಸಿ.ಎಫ್.ಸಿ. ತಂಡದ ಕಾರ್ತಿಕ್, ಎಮರ್ಜಿಂಗ್ ಆಟಗಾರನಾಗಿ ಕುಂದಾ ತಂಡದ ವಿಷ್ಣು, ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಶೈನ್ ಸ್ಟಾರ್ ಕೇರಳ, ಬೆಸ್ಟ್ ಡಿಫೆಂಡರ್ ಕುಂದಾ ತಂಡದ ಅನ್ಶಾಫ್, ಬೆಸ್ಟ್ ಸ್ಟ್ರೈಕರ್ ಆಗಿ ಸಿ.ಸಿ.ಎಫ್.ಸಿ. ತಂಡದ ಪವನ್, ಮಿಡ್ ಫೀಲ್ಡರ್ ಆಗಿ ವಿಜಯನಗರ ತಂಡದ ಪ್ರವೀಣ್ ಹಾಗೂ ಫೈನಲ್ ಪಂದ್ಯದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮೈಸೂರು ತಂಡದ ಮೋಹಿತ್ ಪಡೆದುಕೊಂಡರು.
ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ನ ಅಧ್ಯಕ್ಷ ಮೊಹಮ್ಮದ್ ರಫಿ ವಹಿಸಿದ್ದರು, ಈ ಸಂದರ್ಭ ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪ, ಗೌತಮ್ ರಾಮ್ ಪ್ರಸಾದ್, ಕ್ಲಬ್ನ ಗೌರವಾಧ್ಯಕ್ಷರಾದ ರೈಮನ್ ಸರವೋ, ಉಪಾಧ್ಯಕ್ಷರಾದ ಶಶಿಕುಮಾರ್, ಮಂಜುನಾಥ್, ಜಗದೀಶ್, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಮೊಹಮ್ಮದ್ ಆಲಿ, ಕಂಡಕರೆ ಬ್ರೈಟ್ ಕ್ಲಬ್ನ ಅಧ್ಯಕ್ಷ ಮನ್ಸೂರ್ ಆಲಿ, ಸುರೇಶ್ ಬಾಬು, ಚಂದ್ರ, ಜುಬೈರ್ ಮತ್ತಿತ್ತರರು ಇದ್ದರು.
-ಕೆ.ಎಂ. ಇಸ್ಮಾಯಿಲ್ ಕಂಡಕರೆ