ಮಡಿಕೇರಿ, ಜ. 27: ಭಾರತೀಯ ರಕ್ಷಣಾ ಪಡೆಯ ಮಹಾದಂಡ ನಾಯಕ ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮ ತಾ. 28 ರಂದು (ಇಂದು) ಸರಕಾರಿ ಕಾರ್ಯಕ್ರಮವಾಗಿ ಜಿಲ್ಲಾಡಳಿತ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಆಚರಿಸಲ್ಪಡುತ್ತಿದೆ. ಕೆಲವೊಂದು ಕಾರಣಗಳಿಂದ ಕಾರ್ಯಪ್ಪ ಅವರ 120ನೇ ಜಯಂತಿ ಆಚರಣೆಯ ವಿಚಾರದಲ್ಲಿ ಗೊಂದಲವೇರ್ಪಟ್ಟಿತ್ತಾ ದರೂ ಸರಕಾರ ಕೊನೆಗಳಿಗೆಯಲ್ಲಿ ಈ ಹಿಂದಿನಂತೆ ಇದಕ್ಕೆ ಸ್ಪಂದಿಸಿ ಅನುದಾನ ಪ್ರಕಟಿಸುವದರೊಂದಿಗೆ ಸರಕಾರಿ ಕಾರ್ಯಕ್ರಮವಾಗಿ ಸೇನಾ ನಾಯಕನ ಜನ್ಮದಿನಾಚರಣೆಗೆ ಸಿದ್ಧತೆ ನಡೆದಿದೆ.

ಜಿಲ್ಲಾಡಳಿತದ ಮೂಲಕ ನಡೆಯಲಿರುವ ಕಾರ್ಯಕ್ರಮಕ್ಕೆ ಈ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸಲು ಮುಂದಾಗಿದ್ದ ಫೀ.ಮಾ. ಕೆ.ಎಂ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ ಕೂಡ ಸಹಕಾರ ನೀಡಲು ಮುಂದಾಗಿದ್ದು, ವ್ಯವಸ್ಥಿತ ಆಚರಣೆಗೆ ಸಿದ್ಧತೆ ನಡೆದಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಕಾರ್ಯಕ್ರಮ ಜರುಗಲಿದೆ.

ಬೆಳಿಗ್ಗೆ 11 ಗಂಟೆಗೆ ನಗರದಲ್ಲಿರುವ ಫೀ.ಮಾ. ಕಾರ್ಯಪ್ಪ ಪ್ರತಿಮೆ ಬಳಿ ಜಮಾವಣೆಗೊಂಡು ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಗುವದು. ಬಳಿಕ ಕಾರ್ಯಪ್ಪ ವೃತ್ತದಿಂದ ಕೊಡಗಿನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ಎನ್‍ಸಿಸಿ, ಸೇವಾದಳ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರಿಂದ ಮೆರವಣಿಗೆ ಜರುಗಲಿದ್ದು, ಕೋಟೆ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ನಂದಾ ನಂಜಪ್ಪ, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಫ್ ಕ್ಯಾಫ್ಟನ್ ಆರ್.ಆರ್. ಲಾಲ್ ಅವರುಗಳು ಪಾಲ್ಗೊಳ್ಳಲಿದ್ದಾರೆ.