ಮಡಿಕೇರಿ, ಜ. 25: ಕರ್ನಾಟಕದ ಕೊಡಗು-ಕೇರಳ ರಾಜ್ಯದ ಸಂಬಂಧಕ್ಕೆ ಒಟ್ಟಾಗಿ ಸೇರಿ ಆಚರಣೆ ಮಾಡುವ ಬೈತೂರಪ್ಪ ದೇವರ ಉತ್ಸವವೇ ಸಾಕ್ಷಿ. ಹೊರರಾಜ್ಯದಲ್ಲಿ ನಡೆಯುವ ಈ ಬೈತೂರು ಉತ್ಸವದ ವಿಶೇಷತೆ ನೋಡಿದಾಗ ಮಾತ್ರ ಅರಿವಿಗೆ ಬರಲಿದೆ.

ಕರ್ನಾಟಕದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬಂಧ. ಇದಕ್ಕೆ ಸಾಕ್ಷಿ ಕೊಡಗಿನ ಜನತೆ ಕೇರಳದಲ್ಲಿ ಆಚರಣೆ ಮಾಡುವ ಮೈರೋಮಾಂಚನಗೊಳಿಸುವಂತಹ ಬೈತೂರು ಉತ್ಸವ. ಹೌದು, ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಉಳಿಕ್ಕಲ್ ಎಂಬಲ್ಲಿ ಕೊಡಗು ಜಿಲ್ಲೆಯ ಜನತೆ ಹಾಗೂ ಕೇರಳದ ಜನತೆ ಒಟ್ಟಾಗಿ ಸೇರಿ ಬೈತೂರು ಉತ್ಸವವನ್ನು ಶ್ರದ್ದಾಭಕ್ತಿಯಿಂದ ಆಚರಣೆ ಮಾಡುತ್ತಾರೆ.ವಿಶೇಷ ಎಂದರೆ ಕೊಡಗಿನ ಪುಗ್ಗೇರ ಕುಟುಂಬದವರು ಈ ದೇವಾಲಯದ ತಕ್ಕಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಒಟ್ಟು 11 ದಿನದ ಹಬ್ಬದಲ್ಲಿ ಕೊಡಗಿನವರು ಮೂರು ದಿನ ಪಾಲ್ಗೊಳ್ಳುತ್ತಾರೆ.ಇದರಲ್ಲಿ ತಾ. 24 ರಂದು ಮೊದಲ ಹಬ್ಬ ನಡೆಯುತ್ತದೆ.ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳು ಮೊದಲ ದಿನ ನಡೆಯುತ್ತದೆ. ಕೊಡಗಿನಿಂದ ಸಾವಿರಾರು ಭಕ್ತಾಧಿಗಳು ಇದನ್ನು ನೋಡಲು ಆಗಮಿಸುತ್ತಾರೆ.

ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ ಆದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಕುಣಿಯುವದನ್ನು ನೋಡುವದೇ ಕಣ್ಣಿಗೆ ಹಬ್ಬ.ಇದೇ ಸಂದರ್ಭ ಇಲ್ಲಿ ನಡೆಯುವಂತಹ ಚಂಡೆವಾದ್ಯ ಮತ್ತಷ್ಟು ಅದ್ಭುತವಾಗಿರುತ್ತದೆ. ಎಲ್ಲಾ ಭಕ್ತಾಧಿಗಳಿಂದ ಉತ್ಸವ ಮೂರ್ತಿಯನ್ನು ಹೊತ್ತವರು ಕಾಣಿಕೆಯನ್ನು ಸ್ವೀಕರಿಸುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಕೊಡಗಿನವರು ಮೆರವಣಿಗೆ ಸಂದರ್ಭ ಹಾಡು ಹೇಳುತ್ತಾ ದೇವಾಲಯದ ಸುತ್ತಲೂ ಆಗಮಿಸುತ್ತಾರೆ. ಮೊದಲು ದಿನ ಆಗಮಿಸುವ ಕೊಡಗಿನ ಭಕ್ತರು ಹಾಗೂ ವ್ರತಧಾರಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಮರು ದಿವಸ ದೇವತಾ ಕಾರ್ಯ ಮುಗಿಸಿ ಮರಳುತ್ತಾರೆ. ಎಲ್ಲಾ ಭಕ್ತಾಧಿಗಳಿಗೆ ಇಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.ತಮ್ಮ ಊರಿನಲ್ಲಿ ನಡೆಯುವ ಹಬ್ಬ ಎಂಬಂತೆ ಪ್ರತೀಯೊಬ್ಬರು ಪಾಲ್ಗೊಳ್ಳುವದು ವಿಶೇಷ.

ಒಟ್ಟಿನಲ್ಲಿ ಕೊಡಗಿನ ಆಚಾರ-ವಿಚಾರ ಹೇಗೆ ಭಿನ್ನವೋ ಅದೇ ರೀತಿ ಹಬ್ಬದ ಆಚರಣೆಯಲ್ಲೂ ವಿಶೇಷತೆಯನ್ನು ಮೆರೆದಿದೆ.ಅದರಲ್ಲೂ ಕೇರಳ ರಾಜ್ಯದಲ್ಲೂ ತಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವದು ವಿಶೇಷ.

ಈ ಉತ್ಸವದ ಸಲುವಾಗಿ ಕೊಡಗಿನ ಪುಗ್ಗೇರ ಕುಟುಂಬದ ಎತ್ತೇರಾಟ ಹಾಗೂ ಇತರ ಕುಟುಂಬಗಳಿಂದ ಹರಕೆಯ ರೂಪದಲ್ಲಿ ಈ ಕೈಂಕರ್ಯದೊಂದಿಗೆ ವಿವಿಧ ಪೂಜಾ ಸೇವೆ, ದೇವತಾ ಕಾರ್ಯಗಳು ನೆರವೇರಿತು. ಕಳೆದ ಒಂದು ವಾರದಿಂದ ಜರುಗಿದ ವಿವಿಧ ದೈವಿಕ ಪೂಜೋತ್ಸವದಲ್ಲಿ ಕೊಡಗಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲದೆ ನೂರಾರು ದೈವ ಪಾತ್ರಿಗಳು ದರ್ಶನದೊಂದಿಗೆ ಬೈತೂರಪ್ಪನ ಕೃಪೆಗೆ ಪಾತ್ರರಾದರು.