ಸೋಮವಾರಪೇಟೆ,ಜ25: ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ಪ್ಲಾಸ್ಟಿಕ್ ಮತ್ತು ಕಾಗದದ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಿಡಿಯುವದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹಿಂದು ಜನಜಾಗೃತಿ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ರಾಷ್ಟ್ರ ಧ್ವಜದ ಗೌರವ ಕಾಪಾಡುವ ನಿಟ್ಟಿನಲ್ಲಿ ಅಧ್ಯಾಪಕರು ಮತ್ತು ಪೋಷಕರು ಮಕ್ಕಳಿಗೆ ಸೂಕ್ತ ಮಾಹಿತಿ ನೀಡಬೇಕು. ನಾಗರಿಕರಿಗೆ ಸೂಕ್ತ ತಿಳುವಳಿಕೆ ನೀಡಿ ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವಂತೆ ನೋಡಿಕೊಳ್ಳುವದು ಸರಕಾರ ಕರ್ತವ್ಯವಾಗಿದೆ ಎಂದು ಸಮಿತಿಯ ಪ್ರಮುಖ ಲಕ್ಷ್ಮೀಕಾಂತ್ ಹೇಳಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಅವಮಾನ ಮಾಡಲು ಅವಕಾಶ ನೀಡುವದು ಶಿಕ್ಷಾರ್ಹ ಅಪರಾಧವಾಗಿದೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಧ್ವಜಗಳನ್ನು ಬಳಸುವದರ ಮೇಲೆ ನಿಷೇಧ ಹೇರಿದೆ. ಈ ಕಾರಣದಿಂದ ಪ್ಲಾಸ್ಟಿಕ್ ಧ್ಜಜಗಳನ್ನು ಮಾರಾಟ ಮಾಡುವ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭ ಮಾಜಿ ಸೈನಿಕರಾದ ಈರಪ್ಪ, ಬಸಪ್ಪ, ರತ್ನಕುಮಾರ್, ಮಧು, ವಿನಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.