ಮಡಿಕೇರಿ, ಜ. 25: ತೆಲಂಗಾಣದ ಸರೂರ್ ನಗರದಿಂದ ನಾಪತ್ತೆಯಾಗಿರುವ ಗಣಿ ಉದ್ಯಮಿ ಮಾರುತಿ ಪ್ರಸಾದ್ ಪುತ್ರ ವಿನಯ್ ಬಗ್ಗೆ ಯಾವದೇ ಮಾಹಿತಿ ಲಭ್ಯವಿಲ್ಲದೆ, ತೆಲಂಗಾಣ ಪೊಲೀಸರು ಬರಿಗೈನಲ್ಲಿ ಹಿಂತೆರಳಿದ್ದಾರೆ. ನಗರದ ಹಳೆಯ ಸಿದ್ದಾಪುರ ರಸ್ತೆಯ ಬದಿ ವಿನಯ್‍ಗೆ ಸೇರಿದ ಸ್ಕೋಡಾ ಕಾರು ಪತ್ತೆಯಾದ ಬೆನ್ನಲ್ಲೇ ಆತನ ತಂದೆ ಮಾರುತಿಪ್ರಸಾದ್ ಹಾಗೂ ಪೊಲೀಸರು ಇಲ್ಲಿಗೆ ದೌಡಾಯಿಸಿದ್ದರು.ಆ ಬೆನ್ನಲ್ಲೇ ಕಾರುಪತ್ತೆಯಾದ ಸ್ಥಳದಿಂದ ಅಕ್ಕ ಪಕ್ಕ ಸಿಸಿ ಕ್ಯಾಮರಾ ಪರಿಶೀಲಿಸಿದ ವೇಳೆ ವಿನಯ್ ತನ್ನ ಕಾರು ನಿಲ್ಲಿಸಿದ ಬಳಿಕ ತರಾತುರಿಯಲ್ಲಿ ಸುದರ್ಶನ ವೃತ್ತದತ್ತ ಹೆದ್ದಾರಿಗೆ ಬಂದಿರುವ ಅಂಶ ದೃಢಪಟ್ಟಿದೆ. ಅನಂತರ ಸಮರ್ಪಕ ಮಾಹಿತಿ ದೊರಕದ ಕಾರಣ ತೆಲಂಗಾಣ ಪೊಲೀಸರು ಬರಿಗೈನಲ್ಲಿ ಹಿಂತೆರಳಿದ್ದಾರೆ.ಅಪಹರಣ ಶಂಕೆ: ನಾಪತ್ತೆಯಾಗಿರುವ ವಿನಯ್ ಯಾರದೋ ಆಮಿಷ ಅಥವಾ ಸಂಪರ್ಕಕ್ಕೆ ಸಿಲುಕಿ ಅಪಹರಣಗೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಇನ್ನೊಂದೆಡೆ ಬೆಂಗಳೂರಿನಿಂದ ಮಡಿಕೇರಿಗೆ ಬಂದಿಳಿದ ಆತನನ್ನು ಈ ಹಿಂದೆ ಇಲ್ಲಿಗೆ ಪ್ರವಾಸ ಬಂದಿದ್ದ ಸಂದರ್ಭ ಪರಿಚಯವಾಗಿದ್ದ ಮಂದಿ ಯಾರಾದರೂ ಆಮಿಷವೊಡ್ಡಿ ಕರೆದೊಯ್ದು ಸಂಕಷ್ಟಕ್ಕೆ ಸಿಲುಕಿಸಿದ್ದಾರೆಯೇ? ಎಂಬಿತ್ಯಾದಿ ದಿಸೆಯಲ್ಲಿಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಿನ ಮಟ್ಟಿಗೆ ಕೊಡಗು ಪೊಲೀಸರಿಗೆ ಯಾವದೇ ಸುಳಿವು ಲಭಿಸಿಲ್ಲ ಎಂದು ಜಿಲ್ಲಾ ಪೊಲೀಸ್

(ಮೊದಲ ಪುಟದಿಂದ) ಅಧೀಕ್ಷಕಿ ಡಾ. ಸುಮನ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಪೋಷಕರಲ್ಲಿ ಆತಂಕ : ಪುತ್ರ ವಿನಯ್ ನಾಪತ್ತೆಯಾಗಿ ಎಂಟು ದಿನ ಕಳೆದರೂ ಯಾವದೇ ಸುಳಿವಿಲ್ಲದೆ, ಆತನ ಮೊಬೈಲ್ ಹಾಗೂ ಕಾರು ಮಡಿಕೇರಿಯಲ್ಲಿ ಪತ್ತೆಯಾಗಿರುವ ಬಗ್ಗೆ, ಆತನ ತಂದೆ ಮಾರುತಿ ಪ್ರಸಾದ್ ಹಾಗೂ ತಾಯಿ ಮಲ್ಲಿಕಾ ಮತ್ತು ಸಹೋದರ ವಿಶಾಲ್ ತೀವ್ರ ಆತಂಕಗೊಂಡಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿರುವ ಮಾರುತಿ ಪ್ರಸಾದ್, ತನ್ನ ಮಗನ ಬಗ್ಗೆ ಕೊಡಗು ಪೊಲೀಸರು ತನಿಖೆ ಮೂಲಕ ಒಳ್ಳೆಯ ಸಂದೇಶ ರವಾನಿಸುವ ವಿಶ್ವಾಸ ಹೊಂದಿರುವದಾಗಿ ಪ್ರತಿಕ್ರಿಯಿಸಿದ್ದಾರೆ.