ಕುಶಾಲನಗರ, ಜ. 24: ಮಕ್ಕಳ ಸಹಾಯವಾಣಿ ವತಿಯಿಂದ ಸಮೀಪದ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ ವನ್ನು ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ ಉದ್ಘಾಟಿಸಿ ದರು. ನಂತರ ಮಾತನಾಡಿದ ಅವರು ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದನ್ನು ನಿಯಂತ್ರಿಸು ವಲ್ಲಿ ಪ್ರತಿಯೊಬ್ಬರೂ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬಹುದು ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು, ಕಾನೂನು, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಸ್ವಚ್ಛತೆ ಮತ್ತಿತರ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಸಣ್ಣಯ್ಯ, ಮಕ್ಕಳ ವಿಶೇಷ ಪೊಲೀಸ್ ಘಟಕ ಅಧಿಕಾರಿ ತೇಜಸ್ವಿನಿ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಬಿ.ಕೆ. ಮೋಹನ್, ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಬಿ.ಕೆ. ಕುಮಾರ್, ಎ.ಎಸ್. ಯೋಗೇಶ್, ಆರೋಗ್ಯ ಕಾರ್ಯಕರ್ತೆ ಸೌಮ್ಯ, ಗಿರಿಜನ ಆಶ್ರಮ ಶಾಲೆ ಶಿಕ್ಷಕ ಆನಂದ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು. ಕಾರ್ಯಕ್ರಮದಲ್ಲಿ ಗಿರಿಜನ ಆಶ್ರಮ ಶಾಲೆಯ 70 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.