ಗೋಣಿಕೊಪ್ಪಲು, ಜ.22: ಕಳೆದ ಕೆಲ ದಿನಗಳಿಂದ ವರ್ತಕರಲ್ಲಿದ್ದ ಗೊಂದಲಗಳನ್ನು ನಿವಾರಿಸುವಲ್ಲಿ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಯಶಸ್ವಿಯಾಗಿದ್ದು. ಚೇಂಬರ್‍ನ ನಿರ್ಧಾರಕ್ಕೆ ಪ್ರತಿಯೊಬ್ಬ ವರ್ತಕನೂ ಕೈ ಜೋಡಿಸುವದಾಗಿ ಒಮ್ಮತದ ತೀರ್ಮಾನಕ್ಕೆ ಕೈಗೊಳ್ಳುವ ಸಭೆ ನಡೆಯಿತು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಮೇಲೆ ಕೆಲ ವರ್ತಕರು ಗೋಣಿಕೊಪ್ಪಲುವಿನ ಏಕಮುಖ ಸಂಚಾರದ ನಂತರ ಅಸಮಾಧಾನ ಹೊರ ಹಾಕುತ್ತಿದ್ದರು. ಇದರಿಂದ ಎಚ್ಚೆತ್ತ ಸ್ಥಾನೀಯ ಸಮಿತಿ ಆಯ್ದ ವರ್ತಕರ, ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ಸಭೆಯನ್ನು ಕರೆಯುವ ಮೂಲಕ ವರ್ತಕರಲ್ಲಿರುವ ಅಸಮಾಧಾನವನ್ನು ಬಗೆಹರಿಸುವಲ್ಲಿ ಯಶಸ್ವಿಯಾಯಿತು.ಸ್ಥಾನೀಯ ಸಮಿತಿಯ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಚೇಂಬರ್‍ನ ಹೊಸ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸ ಲಾಯಿತು. (ಮೊದಲ ಪುಟದಿಂದ) ಈ ಸಂದರ್ಭ ಬಹುತೇಕ ವರ್ತಕರು ತಮ್ಮ ನೋವುಗಳನ್ನು ಮುಕ್ತವಾಗಿ ಹಂಚಿಕೊಂಡರು. ಗೋಣಿಕೊಪ್ಪ ನಗರದ ವರ್ತಕರು ಬಂದ್ ಮಾಡಿರುವ ವಿಷಯದಲ್ಲಿ ಚರ್ಚೆಗಳು ನಡೆದವು. ಚೇಂಬರ್‍ನ ಗಮನಕ್ಕೆ ಬಾರದೆ ವರ್ತಕರು ಬಂದ್ ಮಾಡಿರುವ ವಿಷಯದಲ್ಲಿ ಪರ,ವಿರೋಧ ಚರ್ಚೆ ನಡೆಯಿತು. ಈ ಸಂದರ್ಭ ಮುಂದಿನ ಏಕಮುಖ ಸಂಚಾರದ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸೋಣ ಗೋಣಿಕೊಪ್ಪಲುವಿನ ಅಭಿವೃದ್ದಿಗೆ ಪೂರಕವಾಗಿ ಕೆಲಸ ನಿರ್ವಹಿಸೋಣ; ಏಕಮುಖ ಸಂಚಾರದ ವ್ಯವಸ್ಥೆಯಲ್ಲಿನ ಬದಲಾವಣೆ ಈಗಾಗಲೇ ಆರಂಭವಾಗಿರುವದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸೋಣ ಎಂದು ಅಧ್ಯಕ್ಷ ಸುನಿಲ್ ಮಾದಪ್ಪ ಹೇಳುವ ಮೂಲಕ ಅಸಮಾಧಾನಗಳಿಗೆ ತೆರೆ ಎಳೆಯಲಾಯಿತು. ಮುಂದೆ ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳೋಣವೆಂಬ ನಿರ್ಧಾರಕ್ಕೆ ಸಭೆ ಒಮ್ಮತ್ತದ ಒಪ್ಪಿಗೆ ನೀಡಿತು.

ಹಿರಿಯ ವರ್ತಕ ಪುರುಷೋತ್ತಮ್, ಮಹಮ್ಮದ್ ರಫೀ ಚಡ್‍ಖಾನ್, ಶಿವಾಜಿ, ಪಿ.ಕೆ.ಪ್ರವೀಣ್, ಎಂ.ಜಿ.ನಾರಾಯಣ್, ಸಭೆಯಲ್ಲಿ ಏಕಮುಖ ಸಂಚಾರದಿಂದ ವರ್ತಕರಿಗೆ ಆದ ಸಮಸ್ಯೆಯ ಬಗ್ಗೆ ಮಾತನಾಡಿದರು. ಕೊಡಗು ಜಿಲ್ಲಾ ಚೇಂಬರ್‍ನ ಅಧ್ಯಕ್ಷ ಬಿ.ಎನ್.ಪ್ರಕಾಶ್ ಹಾಗೂ ಚೇಂಬರ್‍ನ ಪ್ರಮುಖರಾದ ಕಾಡ್ಯಮಾಡ ಗಿರೀಶ್ ಗಣಪತಿ, ಮರ್ಚೆಂಟ್ ಬ್ಯಾಂಕ್‍ನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ವರ್ತಕರಲ್ಲಿದ್ದ ಗೊಂದಲ ನಿರ್ವಹಣೆಗೆ ಪರಿಹಾರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷÀ ಸಿ.ಕೆ.ಬೋಪಣ್ಣ ಮಾತನಾಡಿ ಗೋಣಿಕೊಪ್ಪ ಏಕಮುಖ ಸಂಚಾರದಿಂದ ಕೆಲವು ಸಮಸ್ಯೆಯಾಗಿರುವದು ನನ್ನ ಗಮನಕ್ಕೆ ಬಂದಿದೆ, ವರ್ತಕರು ಬಂದ್ ನಡೆಸಿರುವದು ಮನಸ್ಸಿಗೆ ನೋವಾಗಿದೆ. ಮುಂದೆ ಎಲ್ಲರನ್ನು ಒಟ್ಟಾಗಿ ವಿಶ್ವಾಸಕ್ಕೆ ಪಡೆದು ಈ ಸಮಸ್ಯೆಯನ್ನು ಬಗೆಹರಿಸೋಣ ಎಂದರು.

ನಮ್ಮಲ್ಲೇ ಸ್ವಪ್ರತಿಷ್ಠೆಗಳು ಬೇಡ, ಈಗಾಗಲೇ ಬೈಪಾಸ್ ರಸ್ತೆಯನ್ನು ಅಗಲೀಕರಣಗೊಳಿಸಲು ಶಾಸಕರ, ಜಿಲ್ಲಾ ಪಂಚಾಯಿತಿ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಕಾಮಗಾರಿ ಆರಂಭಿಸಲಾಗಿದೆ. ಡಾಂಬರೀಕರಣ ಕೆಲವೇ ದಿನಗಳಲ್ಲಿ ಮುಗಿಯಲಿದೆ. ನಂತರ ಈ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ವ್ಯವಸ್ಥೆ ಮಾಡಲಾಗುವದು. ಅಲ್ಲಿಯವರೆಗೂ ಆಗುವ ತೊಂದರೆಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಿ.ಕೆ.ಬೋಪಣ್ಣ ನೇತೃತ್ವದಲ್ಲಿ ಚೇಂಬರ್‍ನ ಪದಾಧಿಕಾರಿಗಳು ಆಯ್ದ ವರ್ತಕರ ತಂಡದ ನಿಯೋಗ ತಾ.28ರ ಒಳಗೆ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.

ಚೇಂಬರ್‍ನ ಕಾರ್ಯದರ್ಶಿ ತೆಕ್ಕಡ ಕಾಶಿ ಸರ್ವರನ್ನು ಸ್ವಾಗತಿಸಿದರು. ನಿರ್ದೇಶಕಿ ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು.ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ಖಜಾಂಚಿ ಮನೋಹರ್, ನಿರ್ದೇಶಕರಾದ ನಾಸೀರ್,ರಾಜಶೇಖರ್,ಅರವಿಂದ್ ಕುಟ್ಟಪ್ಪ, ಎಂ.ಅನಿತಾ ಮುಂತಾದವರು ಹಾಜರಿದ್ದರು. ಸಭೆಯಲ್ಲಿ ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನಲೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.