ಮಡಿಕೇರಿ, ಜ. 21: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಕತ್ತೂರಿನ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಒಂದು ವಾರದ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಹಾಕತ್ತೂರು ವಿಎಸ್‍ಎಸ್‍ಎನ್ ಅಧ್ಯಕ್ಷ ಸಾಬೂ ತಿಮ್ಮಯ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಶಿಬಿರಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದರು.

ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ದೇವಣೀರ ತಿಲಕ್ ಪೊನ್ನಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆಯು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸಾಂಪ್ರದಾಯಿಕ ಆರೋಗ್ಯಕರ ಶಿಷ್ಟಾಚಾರದಿಂದ ದೂರ ಸರಿಯುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರು ವಯಸ್ಸಾಗಿದೆಯೆಂದು ಯಾವದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ ಮಾತನಾಡಿ, ಎನ್‍ಎಸ್‍ಎಸ್‍ನಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ. ಇದರೊಂದಿಗೆ ಎಂಥಹಾ ಸಂದಿಗ್ಧ ಪರಿಸ್ಥಿತಿಯಲ್ಲೂ ಎದೆಗುಂದದೆ ಮುನ್ನಡೆಯುವ ಧೈರ್ಯ ಮೈಗೂಡುತ್ತದೆ. ಸೇವಾ ಮನೋಭಾವ ವೃದ್ಧಿಸುವದರೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪ್ರದೀಪ್ ಭಂಡಾರಿ, ಪಿ.ಎ.ಗೀತಾಂಜಲಿ, ಪಿ.ಸಿ.ಮಂಜುನಾಥ ಗೌಡ, ಎನ್.ಟಿ.ಸಚಿನ್, ಎ.ಎನ್.ಮೋನಿಕಾ, ಬಿ.ತೇಜಸ್ವಿನಿ ಶೆಟ್ಟಿ ಉಪಸ್ಥಿತರಿದ್ದರು.