ವೀರಾಜಪೇಟೆ, ಜ. 22: ಅಂಗವಿಕಲರು, ವಿಕಲಚೇತನರಿಗೆ ಸಮಾಜದಲ್ಲಿ ಎಲ್ಲರಂತೆ ಸಮಾನತೆ ಯನ್ನು ಕಾಯ್ದುಕೊಳ್ಳಲು ವಿಶೇಷ ಸವಲತ್ತುಗಳನ್ನು ನೀಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷ ಜೋಸೆಫ್ ಸಾಮ್ ಹೇಳಿದರು.
ಮಡಿಕೇರಿಯ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ತಾಲೂಕು ಆಡಳಿತ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ಬೆಂಗಳೂರಿನ ಎ.ಪಿ.ಡಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಪುರಭವನದಲ್ಲಿ ಆಯೋಜಿಸಿದ್ದ ವಾಕ್ ಶ್ರವಣದೋಷ ವಿಕಲಚೇತನರ ಅಂಗವಿಕಲರ “ಕೈಸನ್ನೆ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೋಸೆಫ್ ಸಾಮ್ ಅವರು ಅಂಗವಿಕಲರಿಗಾಗಿ ಸರಕಾರ ಒದಗಿಸುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಂಗವಿಕಲರು ಶಿಕ್ಷಣಕ್ಕು ಆದ್ಯತೆ ನೀಡುವಂತಾಗಬೇಕು ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮಾತನಾಡಿ ಸರಕಾರ ವಿಕಲಚೇತನರು ಹಾಗೂ ಅಂಗವಿಕಲರಿಗೆ ಇತರರಿಗಿಂತ ವಿಶೇಷ ಸೌಲಭ್ಯಗಳನ್ನು ಒದಗಿಸಿ ಸಮಾಜದಲ್ಲಿಯೂ ಅವರನ್ನು ಗೌರವವಾಗಿ ಕಾಣಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ವಿಕಲಚೇತನ ಸಬಲೀಕರಣ ಇಲಾಖೆಯ ಅಧಿಕಾರಿ ದೇವರಾಜ್ ಮಾತನಾಡಿ ಅಂಗವಿಕಲರು, ವಿಕಲಚೇತನರಿಗೆ ಇಲಾಖೆ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರಂತರವಾಗಿ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗ ವೀರಾಜಪೇಟೆಯಲ್ಲಿ ಕೈಗೊಂಡ ಮೂರು ದಿನಗಳ ಕಾರ್ಯಕ್ರಮ ಯಶಸ್ಸನ್ನು ಕಂಡಿದೆ. ಅಧಿಕಾರಿಗಳು ಎಲ್ಲ ಸಂಘ ಸಂಸ್ಥೆಗಳು ಈ ತರಬೇತಿಗೆ ಅನುಕಂಪದಿಂದ ಎಲ್ಲ ರೀತಿಯ ಸಹಾಯವನ್ನು ನೀಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ.ಚೋಂದಮ್ಮ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಬೆಂಗಳೂರಿನ ಎ.ಪಿ.ಡಿ.ಸಂಸ್ಥೆಯ ಮಾಹಿತಿಗಾರರಾದ ಕೃಪಾ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷೆ ಗೌರು ಸೋಮಣ್ಣ, ಶಿರಸ್ತೆದಾರ್ ಚಿಣ್ಣಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತರಬೇತಿ ಪಡೆದ ಸುಮಾರು 200ಮಂದಿಗೆ ತರಬೇತಿ ದೃಢೀಕರಣ ಪತ್ರ ವಿತರಿಸಲಾಯಿತು. ಆಯಿಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರುಗಳಾದ ಪ್ರಥನ್ ಕುಮಾರ್, ಗಾಯಿತ್ರಿ, ಶಾಂತಿ, ಪಾರ್ವತಿ ಹಾಜರಿದ್ದರು. ವೀರಾಜಪೇಟೆಯಲ್ಲಿ ನಡೆದ ತರಬೇತಿಯಲ್ಲಿ ತಾಲೂಕಿನಾದ್ಯಂತ ವಿಕಲಚೇತನರು, ಅಂಗವಿಕಲರು ಭಾಗವಹಿಸಿದ್ದರು. ತರಬೇತಿಯು ಮೂರು ದಿನಗಳ ಕಾಲ ನಡೆಯಿತು.