ವೀರಾಜಪೇಟೆ, ಜ. 21: ಶಿಕ್ಷಣದಲ್ಲಿನ ಅಂಕಗಳ ಜೊತೆಗೆ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಜೀವನದ ಮೌಲ್ಯಗಳನ್ನು ಅರಿತುಕೊಂಡರೆ ಜೀವನದ ಭವಿಷ್ಯದಲ್ಲಿ ಒಂದು ಹಂತವನ್ನು ತಲಪಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಸುಬ್ರಮಣ್ಯ ಯಡಪಡಿತಾಯ ಹೇಳಿದರು. ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕೌಶಲ್ಯತೆ ಎಲ್ಲರಲ್ಲೂ ಇರುತ್ತದೆ. ವಿದ್ಯಾರ್ಥಿಗಳ ಶಿಕ್ಷಣವನ್ನು 4 ರೀತಿಯಲ್ಲಿ ವರ್ಗಿಕರೀಸಬಹುದಾಗಿದೆ. ವಿದ್ಯೆಯಲ್ಲಿ ಆಸಕ್ತಿ ಇಲ್ಲದಿದ್ದರೆ ಗುರಿ ಮುಟ್ಟಲು ಸಾಧ್ಯವಾಗುವದಿಲ್ಲ. ಸ್ವತಃ ತನ್ನಷ್ಟಕ್ಕೆ ತಾನು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದುವದನ್ನು ಬಿಟ್ಟು ಶಿಕ್ಷಣದಲ್ಲಿ ಯಶಸ್ಸನ್ನು ಕಾಣಲು ಸುಲಭದ ಮಾರ್ಗವನ್ನು ಕಂಡುಕೊಳ್ಳಲು ಇಷ್ಟ ಪಡುತ್ತಾರೆ. ಕೇವಲ ಯೋಚನೆ ಮಾಡಿ ಪ್ರಯೋಜನವಿಲ್ಲ. ಪ್ರಯೋಜನವಾಗುವದನ್ನು ಯೋಚನೆ ಮಾಡಿದರೆ ಉಪಯೋಗಕ್ಕೆ ಬರುತ್ತದೆ. ವಿದ್ಯಾಥಿಗಳಿಗೆ ಸ್ಮಾರ್ಟ್‍ಫೋನ್‍ಗಳು ಶಾಪವಾಗಿ ಪರಿಣಮಿಸುತ್ತಿದೆ. ಇದು ಹೆಚ್ಚಾಗಿ ಉಪಯೋಗಿಸಿದಲ್ಲಿ ಅಪಾಯ ತಪ್ಪಿದಲ್ಲ ಎಂದು ಹೇಳಿದರು.

ಚಲನಚಿತ್ರ ನಟಿ ಹಾಗೂ ರೂಪದರ್ಶಿ ಉಳ್ಳಿಯಡ ಶುಭ್ರ ಅಯ್ಯಪ್ಪ ಮಾತನಾಡಿ ಸಾಧಿಸುವ ಛಲ ಹೊಂದಿದ್ದರೆ ಎಲ್ಲವನ್ನು ಸಾಧಿಸಬಹುದಾಗಿದೆ. ನಮ್ಮ ಪ್ರಯತ್ನದ ಜೊತೆಗೆ ಪೋಷಕರ ಸಹಕಾರ ಇದ್ದರೆ ಜಯಿಸಬಹುದಾಗಿದೆ. ಸಮಾಜದಲ್ಲಿ ಮೊದಲು ಪ್ರತಿಯೊಬ್ಬರಿಗೂ ಗೌರವ ಕೊಡುವದನ್ನು ಕಲಿತುಕೊಂಡರೆ ಅವರ ಜೀವನ ಸಾರ್ಥಕವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾವೇರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕುಟ್ಟಂಡ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಸಿ.ಎಂ ನಾಚಪ್ಪ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್,ಎಂ ನಾಣಯ್ಯ, ಪ್ರೊ. ಶಂಕರ್ ನಾರಾಯಣ್, ಉಪನ್ಯಾಸಕಿ ಡಯಾನಾ ವಿದ್ಯಾರ್ಥಿ ಸಂಘದ ಪಾದಾಧಿಕಾರಿಗಳು ಉಪಸ್ಥಿತರಿದ್ದರು.