ಒಡೆಯನಪುರ, ಜ. 20: ‘ಮೀನು ಸೇವನೆ ಉತ್ತಮವಾದ ಪೌಷ್ಟಿಕ ಆಹಾರವಾಗಿದ್ದು ಮೀನು ಸಾಕಾಣಿಕೆ ಲಾಭದಾಯಕ ಕೃಷಿಯಾಗಿದೆ’ ಎಂದು ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಅಭಿಪ್ರಾಯಪಟ್ಟರು. ಸಮೀಪದ ದುಂಡಳ್ಳಿ ಗ್ರಾಮದ ದವಸ ಭಂಡಾರ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ಒಕ್ಕೂಟ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಾಣಿಕೆ ಕುರಿತು ಸಂಘದ ಸದಸ್ಯರು ಮತ್ತು ರೈತರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಕೃಷಿಕ ರೈತರು ಮೀನು ಸಾಕಾಣಿಕೆಯಲ್ಲಿ ಆಸಕ್ತಿ ವಹಿಸಿದಲ್ಲಿ ಮೀನುಗಾರಿಕೆ ಇಲಾಖೆ ಮೀನು ಮರಿಯನ್ನು ವಿತರಿಸುವದರ ಜೊತೆಯಲ್ಲಿ ಬಲೆ, ಕೆಲವೊಂದು ಸಲಕರಣೆ, ಮೀನು ಸಾಕಾಣಿಕೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು. ಮೀನು ಉತ್ತಮ ಪೌಷ್ಠಿಕ ಆಹಾರವಾಗಿದ್ದು, ನೈಸರ್ಗಿಕ ಮತ್ತು ಕ್ರಮಬದ್ದವಾಗಿ ಮೀನು ಸಾಕಾಣಿಕೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದಾಗಿದೆ ಎಂದರು. ರೈತರು, ಧರ್ಮಸ್ಥಳ ಸಂಘದ ಸದಸ್ಯರು ಮತ್ತು ಆಸಕ್ತರು ಮೀನು ಕೃಷಿಯನ್ನು ಮಾಡಿದಲ್ಲಿ ಇಲಾಖೆ ಎಲ್ಲಾ ರೀತಿಯ ನೆರವನ್ನು ನೀಡುತ್ತದೆ, ರೈತರು ತಮಗೆ ಸೇರಿದ ಕೆರೆ, ಕೃಷಿಹೊಂಡ, ಸಾರ್ವಜನಿಕ ಕೆರೆಗಳಲ್ಲಿ ಉತ್ತಮ ವಿವಿಧ ತಳಿಯ ಮೀನುಗಳನ್ನು ಸಾಕಾಣಿಕೆ ಮಾಡಬಹುದು, ಇಲಾಖೆ ಪ್ರತಿವರ್ಷ ಆಗಸ್ಟ್‍ನಿಂದ ನವೆಂಬರ್ ತಿಂಗಳ ವರೆಗೆ ಮೀನುಮರಿಗಳನ್ನು ವಿತರಣೆ ಮಾಡುತ್ತದೆ, ಈ ನಿಟ್ಟಿನಲ್ಲಿ ರೈತರು ತಮ್ಮ ಕೆರೆ, ಕೃಷಿಹೊಂಡಗಳಲ್ಲಿ ನೈಸರ್ಗಿಕವಾಗಿ ಸಿದ್ಧತೆ ಮಾಡಿಕೊಂಡು ಮೀನುಮರಿ ಪಡೆದುಕೊಂಡ ನಂತರ ಮೀನು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದೆಂದರು.
ಮೀನು ಸಾಕಾಣಿಕೆಯನ್ನು ಕ್ರಮಬದ್ಧವಾಗಿ ಮಾಡಬೇಕು, ಮೀನು ಸಾಕಾಣಿಕೆಯ ಕೃಷಿಹೊಂಡ, ಕೆರೆಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ನೀರಿನಲ್ಲಿ ಜೀವಿಸುವ ಮೀನುಗಳಿಗೆ ಮೀನುಗಾರಿಕೆ ಇಲಾಖೆ ಸೂಚಿಸುವ ಆಹಾರವನ್ನಷ್ಟೆ ನೀಡಬೇಕು, ಇದರಿಂದ ಮೀನು ಬಲಿಷ್ಟವಾಗಿ ಬೆಳೆಯುತ್ತದೆ ಇದರಿಂದ ಮೀನು ಕೃಷಿಕನಿಗೆ ಉತ್ತಮ ಲಾಭವಾಗುತ್ತದೆ ಎಂದರು. ಇಲಾಖೆ ಮಹಿಳೆಯರು ಮೀನು ಸಾಕಾಣಿಕೆ ಮಾಡಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ. ಪರಿಶಿಷ್ಟ ಜಾತಿ ಪಂಗಡದ ಮಹಿಳಾ ಮೀನು ಸಾಕಾಣಿಕ ಫಲಾನುಭವಿಗಳಿಗೆ ವಿಶೇಷ ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೀನುಗಾರಿಕೆ ಇಲಾಖೆ ವತಿಯಿಂದ ಹಲವಾರು ಗ್ರಾಮಗಳ ಕೆರೆಗಳನ್ನು ಮೀನು ಸಾಕಾಣಿಕೆ ಮಾಡಲು ಮೀನುಮರಿಯನ್ನು ವಿತರಿಸಿದ್ದು ಉತ್ತಮವಾಗಿ ಮೀನು ಕೃಷಿಯನ್ನು ಮಾಡುತ್ತಿದ್ದಾರೆ ಈ ಹಿನೆÀ್ನಲೆಯಲ್ಲಿ ರೈತರು ತಮ್ಮ ಕೆರೆ ಕೃಷಿಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುವದರ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮನವಿ ಮಾಡಿದರು. ಕಾರ್ಯಾಗಾರದಲ್ಲಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗೀತ ಮಾತನಾಡಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಎಸ್.ಆರ್. ಶೋಭಾವತಿ, ಪವನ್, ಸಂಘದ ಸದಸ್ಯರು ಮತ್ತು ರೈತರು ಪಾಲ್ಗೊಂಡಿದ್ದರು.
- ವಿ.ಸಿ. ಸುರೇಶ್ ಒಡೆಯನಪುರ