ಮಡಿಕೇರಿ, ಜ. 20: ಜಿಲ್ಲೆಯಲ್ಲಿ ಪೂರ್ವಿಕರು ಉಳಿಸಿ ಬೆಳೆಸಿಕೊಂಡು ಬಂದಿರುವ ದವಸ ಭಂಡಾರಗಳ ಸಹಕಾರ ಸಂಘಗಳನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮನವಿ ಮಾಡಿದ್ದಾರೆ.

ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ ದಲ್ಲಿ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ ಸಂಘಗಳ ಅಭಿವೃದ್ಧಿ ಶಿಕ್ಷಣ ಕುರಿತು ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ 82 ದವಸ ಭಂಡಾರಗಳಿದ್ದು, ಇಡೀ ದೇಶದಲ್ಲಿಯೇ ಮಾದರಿಯಾದ ದವಸ ಭಂಡಾರಗಳನ್ನು ಜಿಲ್ಲೆಯಲ್ಲಿ ಕಾಣ ಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ದವಸ ಭಂಡಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದರು.

ಭಾಗಮಂಡಲದಲ್ಲಿ 1918 ರಲ್ಲಿಯೇ ದವಸ ಭಂಡಾರಗಳ ಸಹಕಾರ ಸಂಘ ಸ್ಥಾಪಿಸುವ ಮೂಲಕ ಆರ್ಥಿಕ ಹಾಗೂ ಕೃಷಿ ಜಾಗೃತಿ ಕಾಣ ಬಹುದಾಗಿದೆ ಎಂದು ತಿಳಿಸಿದರು.

ಹಿಂದೆ ದವಸ ಭಂಡಾರಗಳ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಕೃಷಿಕರು ಉತ್ಪಾದಿಸಿದ ಉತ್ಪನ್ನಗಳನ್ನು ಸಂಗ್ರಹಿಸಿ, ಪಡೆಯುವ ವ್ಯವಸ್ಥೆ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ತಾಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕøತ ಕೆ.ಎಂ. ಸೋಮಯ್ಯ ಮಾತನಾಡಿ, ಜಿಲ್ಲೆಯ ದವಸ ಭಂಡಾರಗಳಿಗೆ ಹಿಂದೆ ಬಹಳ ಮಹತ್ವವಿತ್ತು. ಬ್ಯಾಂಕ್‍ಗಳು ಇಲ್ಲದ ಕಾಲದಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವವಾಗಿತ್ತು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಲವು ದವಸ ಭಂಡಾರಗಳು ಇಂದಿಗೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸಿ ಕೊಂಡು ಬರುತ್ತಿವೆ. ಇದನ್ನು ಇನ್ನಷ್ಟು ಉತ್ತಮಪಡಿಸಿಕೊಂಡು ಹೋಗು ವಂತಾಗಬೇಕು ಎಂದು ಸಲಹೆ ಮಾಡಿದರು.

ನಬಾರ್ಡ್‍ನ ಸಹಾಯಕ ಮಹಾಪ್ರಬಂಧಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಜಿಲ್ಲೆಯಲ್ಲಿ ದವಸ ಭಂಡಾರಗಳನ್ನು ಬಲಪಡಿಸಲು ಶ್ರಮಿಸಬೇಕಿದೆ. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಧವಸ ಭಂಡಾರಗಳನ್ನು ಇನ್ನಷ್ಟು ಪುನಶ್ಚೇತನ ಗೊಳಿಸುವಂತಾಗಬೇಕು ಎಂದು ಹೇಳಿದರು.

ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ ದೊರೆಯುವಂತಾಗಬೇಕು. ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಆರ್ಥಿಕ ಚಟುವಟಿಕೆ ಕೈಗೊಳ್ಳು ವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಜೇನು, ಕಿತ್ತಳೆ ಹೀಗೆ ಹಲವು ರೀತಿಯ ಬೆಳೆಗಾರರ ಸಂಘಗಳಿದ್ದು, ಅವುಗಳನ್ನು ಬಲಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಕೃಷಿ ಉಪ ಕಸುಬುಗಳಾದ ಹಸು, ಕೋಳಿ ಸಾಕಾಣಿಕೆ, ಹಾಗೆಯೇ ಗುಡಿ ಕೈಗಾರಿಕೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಹಕಾರ ಸಂಘ ಗಳನ್ನು ಪುನಶ್ಚೇತನ ಗೊಳಿಸು ವಂತಾಗಬೇಕು ಎಂದು ಹೇಳಿದರು.

ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಅವರು ಸಹಕಾರ ಧವಸ ಭಂಡಾರಗಳ ಪುನಶ್ಚೇತನ ಸಂಬಂಧ ಹಲವು ಮಾಹಿತಿ ನೀಡಿದರು.

ಸಹಕಾರಿ ಯೂನಿಯನ್‍ನ ವ್ಯವಸ್ಥಾಪಕಿ ಮಂಜುಳ ಪ್ರಾರ್ಥಿಸಿದರು. ಸಹಕಾರಿ ಯೂನಿಯನ್‍ನ ಸಿಇಓ ಯೋಗೇಂದ್ರ ನಾಯಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.