ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ನಿರ್ಮಾಣ ಮಾಡಿರುವ ಶಾರದಾ ಮಂದಿರದಲ್ಲಿ ಭಾನುವಾರ ಶ್ರೀ ಶಾರದ ಮಾತೆಯ ಪ್ರತಿಪ್ಠಾಪನೆಯನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೆರವೇರಿಸಿದರು.
ಕಾಲೇಜು 25 ವರ್ಷಕ್ಕೆ ಕಾಲಿಟ್ಟಿರುವ ಸವಿನೆನಪಿಗಾಗಿ ಶಾಲಾಭಿವೃದ್ಧಿ ಸಮಿತಿ, ಮಂಟಿಗಮ್ಮ ದೇವತಾ ಸಮಿತಿ, ಹಳೇಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ರೂ.16 ಲಕ್ಷ ವೆಚ್ಚದಲ್ಲಿ ಶಾರದಾ ಮಂದಿರ, ಕ್ರೀಡಾ ಗ್ಯಾಲರಿ ಹಾಗೂ ಪ್ರವೇಶ ದ್ವಾರ ವನ್ನು ಅಭಿವೃದ್ಧಿ ಪಡಿಸಲಾಗಿದೆ. ಬೆಳಿಗ್ಗೆಯಿಂದಲೇ ಶಾರದಾ ಮಂದಿರದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾಲೇಜಿನ ಬೆಳ್ಳಿಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣ ಹಾಗೂ ಬಣ್ಣ ಬಣ್ಣದ ಕಾಗದಗಳ ಗಳಿಂದ ಶೃಂಗಾರಿಸಲಾಗಿತ್ತು. ಸುಗಮ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆಯಡಿ ಪ್ರ್ರಾಯೋಜಿತ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ತಬಲ ಭಾರಿಸುವ ಮೂಲಕ ಚಾಲನೆ ನೀಡಿದರು. ಕಲಾವಿದ ಬಿ.ಎಸ್.ಲೋಕೇಶ್ ಸಾಗರ್ ಮತ್ತು ತಂಡದವರಿಂದ ಸುಗಮ ಸಂಗೀತ ನಡೆಯಿತು. ಕಲಾವಿದರಾದ ಶಶಂಕ್, ಶ್ವೇತಾ, ವೆಂಕಟೇಶ್, ರಂಗಪ್ಪ ಇದ್ದರು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದರೆ ಖಾಸಗಿ ಸಂಸ್ಥೆಗಳಲ್ಲಿ ಏರಿಕೆ ಆಗುತ್ತಿದೆ. ಪೋಷಕರು ಇಂಗ್ಲಿಷ್ ವ್ಯಾಮೋಹ ದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಬದುಕಿನ ಭಾಷೆಗಾಗಿ ಇಂಗ್ಲಿಷ್ ಕಡ್ಡಾಯವಾಗಿದೆ ಆದರೆ ಕನ್ನಡವನ್ನು ಕಡೆಗಣಿಸಬಾರದು.
ಕೇವಲ ವೇದಿಕೆಗಳಲ್ಲಿ ಭಾಷಣ ಮಾಡಲು ಸೀಮಿತರಾಗದೆ ಸಾಹಿತಿ ಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಓದಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಲು ಮುಂದಾಗ ಬೇಕು ಎಂದು ರಂಜನ್ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಯಾವದೇ ಒಂದು ವಿದ್ಯಾಸಂಸ್ಥೆ ಬೆಳವಣಿಗೆ ಹೊಂದಬೇಕಾದರೆ ಅಭಿವೃದ್ಧಿ ಸಮಿತಿ, ವಿದ್ಯಾರ್ಥಿ ವೃಂದ, ಶಿಕ್ಷಕ ವೃಂದ ಹಾಗೂ ಪೋಷಕರು ಸಮನ್ವಯತೆಯೊಂದಿಗೆ ಒಟ್ಟಾಗಿ ಹೋದರೆ ಗುರಿ ಸಾಧಿಸಬಹುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಆರ್.ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕ ವರ್ಗ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿ ವರ್ಷ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಹೋಗುವ ಕ್ರೀಡಾಪಟುಗೆ ಹಾಗೂ ಅತೀ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ ತಲಾ ರೂ.5 ಸಾವಿರ ದತ್ತಿನಿಧಿ ಸ್ಥಾಪಿಸುವದಾಗಿ ಭರವಸೆ ನೀಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ. ನಂಜುಂಡಪ್ಪ ಮಾತನಾಡಿ, ಜಿಲ್ಲೆಯ ಗಡಿಗ್ರಾಮವಾದ ಶಿರಂಗಾಲಕ್ಕೆ ರೈತ ಭವನ, ಮಂಟಿಗಮ್ಮ ದೇವಸ್ಥಾನ ರಸ್ತೆ ಅಭಿವೃದ್ಧಿಯನ್ನು ಶಾಸಕರು ತಮ್ಮ ಅನುದಾನದಲ್ಲಿ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆಂಚಪ್ಪ ಮಾತನಾಡಿ, ಜಿಲ್ಲೆಯಲ್ಲಿ ನೆಲ್ಲಿಹುದಿ ಕೇರಿ, ನಾಪೋಕ್ಲು, ಪೊನ್ನಂಪೇಟೆ ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಮೇಲ್ದಾರ್ಜೆಗೇರಿಸಲಾಗಿದೆ. ಅಲ್ಲದೆ ಶಿರಂಗಾಲ, ಆಲೂರು ಸಿದ್ಧಾಪುರ, ಪಾಲಿಬೆಟ್ಟ ಹಾಗೂ ಮಡಿಕೇರಿ ಶಾಲೆಗಳನ್ನು ಪಬ್ಲಿಕ್ ಶಾಲೆಯನ್ನಾಗಿ ಮಾಡಲು ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.
ರಜತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರೂ ಆದ ಗ್ರಾ.ಪಂ.ಅಧ್ಯಕ್ಷ ಎನ್.ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಎನ್.ಎಸ್.ಜಯಣ್ಣ, ಮಾಜಿ ಉಪಾಧ್ಯಕ್ಷ ಟಿ.ಕೆ.ಪಾಂಡುರಂಗ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಬಿ.ಮಹೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಮಂಟಿಗಮ್ಮ ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಿ.ಎನ್. ಲೋಕೇಶ್, ಎಪಿಸಿಎಂಎಸ್ ನಿರ್ದೇಶಕ ಟಿ.ಬಿ.ಜಗದೀಶ್, ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಚಿತ್ರಾ, ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಮುಖಂಡರಾದ ರಾಜಪ್ಪ, ಎಸ್.ಎಸ್. ಕೃಷ್ಣ, ಧರಣೇಂದ್ರ ಕುಮಾರ್, ತಮ್ಮಯ್ಯ, ಎಸ್.ಎನ್.ಶ್ರೀಧರ್, ರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಣಜೂರು ಮಂಜುನಾಥ್, ಇಂಜಿನಿಯರ್ ವಿರೇಂದ್ರ, ಸಂಸ್ಥೆ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು, ಮುಖ್ಯ ಶಿಕ್ಷಕ ಸೋಮಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಎಚ್.ಪಿ. ಶಿವಕುಮಾರ್ ನಿರೂಪಿಸಿದರು. ವಿದ್ಯಾರ್ಥಿನಿ ಅಕ್ಷತಾ ತಂಡದವರು ಪ್ರಾರ್ಥಿಸಿದರು.