ಮಡಿಕೇರಿ, ಜ. 20: ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಮೈಸೂರು ಜೆ.ಎಸ್.ಎಸ್. ಆಸ್ಪತ್ರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬಸ್ಥರಿಗೆ ತಾ. 24 ರಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ತಪಾಸಣಾ ಶಿಬಿರವು ಮಡಿಕೇರಿಯ ಬಾಲಭವನದಲ್ಲಿ ಬೆಳಿಗ್ಗೆ 9 ರಿಂದ 3 ಗಂಟೆಯವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಹೃದಯ ರೋಗ ತಜ್ಞರು, ಕಿವಿ, ಮೂಗು, ಗಂಟಲು, ಮೂಳೆ ತಜ್ಞರು ಹಾಗೂ ಜನರಲ್ ಮೆಡಿಸನ್ ವೈದ್ಯರುಗಳು ಆಗಮಿಸಲಿದ್ದಾರೆ. ಈ ಸಂದರ್ಭ ಇಸಿಜಿ, ಎಕೋ ಪರೀಕ್ಷಾ ವ್ಯವಸ್ಥೆಯಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರು ತಮ್ಮ ಕುಟುಂಬಸ್ಥರ ಸಹಿತ ಆಗಮಿಸಿ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯಿಂದ ಪತ್ರಕರ್ತರಿಗೆ ಅನುಕೂಲವಾಗುವ ಕಾರ್ಯಕ್ರಮ ಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವದು. ಪತ್ರಕರ್ತರಿಗೆ ಗುಂಪು ವಿಮೆ, ಡಿಎಲ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತಿತರ ದಾಖಲೆ ಪ್ರಮಾಣ ಪತ್ರಗಳನ್ನು ಸಮಿತಿಯಿಂದ ಮಾಡಿಕೊಡ ಲಾಗುವದು ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಉದ್ಘಾಟಿಸಲಿದ್ದಾರೆ. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬಾಲಭವನದ ಅಧ್ಯಕ್ಷ ಮೋಹನ್ ಮೊಣ್ಣಪ್ಪ, ಪ್ರೆಸ್ಕ್ಲಬ್ ಉಪಾಧ್ಯಕ್ಷ ಲೋಕೇಶ್ ಸಾಗರ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂಗಪ್ಪ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್ ಪಾಲ್ಗೊಳ್ಳಲಿದ್ದಾರೆ.
ಸಂಜೆ 2.30ಕ್ಕೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಉಪ ವಿಭಾಗಾಧಿಕಾರಿ ಜವರೇಗೌಡ, ರಾಷ್ಟ್ರೀಯ ಪತ್ರಕರ್ತರ ಮಂಡಳಿ ಸದಸ್ಯ ಮುರುಳೀಧರ್, ಕೊಡಗು ಪ್ರೆಸ್ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ, ಉದ್ಯಮಿ ಬಿ.ಎಸ್. ಸುಂದರ್, ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ.ಬಿ. ಸೋಮಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಸೀರ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಟಿ.ಕೆ. ಸಂತೋಷ್, ಪ್ರೆಸ್ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ.ಬಿ. ಸೋಮಪ್ಪ ಹಾಜರಿದ್ದರು.