ಸೋಮವಾರಪೇಟೆ,ಜ.20: ತಾಲೂಕಿನ ನಾಡ್ನಳ್ಳಿ ಗ್ರಾಮದ ಕುಮಾರಧಾರ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಲಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಗಳು, ಸುಮಾರು 20 ಲೋಡ್ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ.
ಕುಮಾರಧಾರ ಹೊಳೆಯಿಂದ ಅಕ್ರಮವಾಗಿ ಮರಗಳನ್ನು ತೆಗೆದು ಹೊಳೆಯ ಬದಿಯಲ್ಲಿ ಶೇಖರಿಸಿಡಲಾಗಿತ್ತು. ಸರ್ಕಾರದ ಅನುಮತಿಯಿಲ್ಲದೇ ಅಕ್ರಮವಾಗಿ ತೆಗೆಯಲಾಗಿದ್ದ ಬಗ್ಗೆ ದೊರೆತ ಮಾಹಿತಿಯ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸಿಬ್ಬಂದಿಗಳಾದ ಕುಮಾರಸ್ವಾಮಿ, ಮಹದೇಶ್ವರ ಸ್ವಾಮಿ, ಅನಂತ್ಕುಮಾರ್, ಮಂಜುನಾಥ್ ಅವರುಗಳು, 20ಲೋಡ್ನಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿಗೆ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಅಧಿಕಾರಿ ರೇಷ್ಮ ಅವರು ಮಹಜರು ನಡೆಸಿದ್ದು, ಮರಳನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೊನ್ನೆಯಷ್ಟೇ ನಾಡ್ನಳ್ಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ಈ ಘಟನೆಗೂ ಅಕ್ರಮ ಮರಳುಗಾರಿಕೆಯೂ ನಂಟಿರುವ ಬಗ್ಗೆ ಸ್ಥಳೀಯ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.