ಮಡಿಕೇರಿ, ಜ. 20: ಕೇಬಲ್ ಟಿ.ವಿ. ಸಂಪರ್ಕಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಅವರ ಆಸಕ್ತಿಯ ಚಾನಲ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಟ್ರಾಯ್ ರೂಪಿಸಿರುವ ಹೊಸ ನೀತಿ ಖಂಡಿತವಾಗಿಯೂ ಜನಪರವಾಗಿಲ್ಲ. ಇದು ಜನವಿರೋಧಿಯಾಗಿದೆ ಎಂದು ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್. ಪ್ಯಾಟ್ರಿಕ್ ರಾಜು ಅವರು ಹೇಳಿದ್ದಾರೆ. ವಿರೋಧದ ನಡುವೆಯೂ ಟ್ರಾಯ್ ಫೆ. 1 ರಿಂದ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದು, ಈಗಾಗಲೇ ಈ ಬಗ್ಗೆ ಸೂಚನೆ ಹೊರಬಿದ್ದಿದೆ.100 ಚಾನಲ್‍ಗಳಿಗೆ ರೂ. 153ರ ದರ ಮಾತ್ರ ಅನ್ವಯ ಎಂಬ ಅಂಶವನ್ನು ಮುಂದಿಟ್ಟು ಹೊಸ ನಿಯಮ ಜಾರಿಗೆ ತರಲು ಮುಂದಾಗಲಾಗಿದೆ. ಆದರೆ ಇದರಿಂದ ಆಗುವ ಅನಾನುಕೂಲ ನಿಧಾನಗತಿಯಲ್ಲಿ ಗ್ರಾಹಕರಿಗೆ ಅರಿವಿಗೆ ಬರಲಿದೆ ಎಂದು ಹೇಳಿರುವ ಅವರು ಕೇಬಲ್ ಆಪರೇಟರ್ಸ್ ಹೊಸ ನಿಯಮವನ್ನು ಈಗಲೂ ವಿರೋಧಿಸುತ್ತಿದ್ದು, ಈ ನಿಟ್ಟಿನಲ್ಲಿ ತಾ. 24 ರಂದು ಇಡೀ ದಕ್ಷಿಣ ಭಾರತದಲ್ಲಿ ಕೇಬಲ್ ಸಂಪರ್ಕ ಜಾಲ ಬಂದ್ ಮಾಡಿ ಪ್ರತಿಭಟನೆ ನಡೆಸಲು ಕೇಬಲ್ ಆಪರೇಟರ್ಸ್ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದ್ದಾರೆ.‘ಶಕ್ತಿ’ಯೊಂದಿಗೆ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಟ್ರಿಕ್ ರಾಜು ಅವರು ಈ ವಿಚಾರದಲ್ಲಿನ ಅಂಶಗಳ ಕುರಿತು ವಿವರ ನೀಡಿದ್ದಾರೆ.ರೂ. 154ಕ್ಕೆ 100 ಚಾನಲ್
ಹೊಸ ನಿಯಮದಂತೆ ಟಿ.ವಿ. ವೀಕ್ಷಕರಿಗೆ 100 ಉಚಿತ ಚಾನಲ್‍ಗಳನ್ನು ರೂ. 130ರ ಮೂಲ ದರ ಹಾಗೂ ಶೇ. 18 ತೆರಿಗೆ ಸೇರಿ ರೂ. 154ಕ್ಕೆ ನೀಡಲಾಗುವದು ಎಂದು ತಿಳಿಸಲಾಗಿದೆ. ಆದರೆ ಇದರಲ್ಲಿ ಗ್ರಾಹಕರಿಗೆ ನೈಜತೆಯ ಅರಿವು ಮುಂದಿನ ದಿನಗಳಲ್ಲಿ ಆಗಲಿದೆ ಎಂಬದು ಅವರ ಅಭಿಪ್ರಾಯವಾಗಿದೆ.
ಏನಿದು ಹೊಸ ನಿಯಮ?
ಇನ್ನು ಮುಂದೆ ಜಿಎಸ್‍ಟಿ ಸೇರಿದಂತೆ ಮಾಸಿಕ 154ಕ್ಕೆ ಜನರು 100 ಚಾನಲ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ 100 ಚಾನಲ್‍ಗಳಲ್ಲಿ ಪಾವತಿ ಚಾನಲ್‍ಗಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನಲ್‍ಗಳ ದರ ರೂ. 130 ದಾಟುವಂತಿಲ್ಲ. ಅಂದರೆ ಉದಾಹರಣೆಗೆ ರೂ. 13 ಬೆಲೆಯ 10ರ ಚಾನಲ್‍ಗಳನ್ನಷ್ಟೆ ಗ್ರಾಹಕರು ಉಚಿತವಾಗಿ ಆಯ್ಕೆಮಾಡಿ ಕೊಳ್ಳಬಹುದು.
ಟ್ರಾಯ್ ನಿಯಮದಂತೆ 100 ಉಚಿತ ಚಾನಲ್‍ಗಳಲ್ಲಿ ಸುಮಾರು 23 ರಷ್ಟು ದೂರದರ್ಶನ ಚಾನಲ್‍ಗಳು ಬರುತ್ತವೆ ಹಾಗೂ ಫ್ರೀಟು ಏರ್ ಚಾನಲ್‍ಗಳು ಇದರಲ್ಲಿ ಒಳಗೊಂಡಿವೆ. ಕನ್ನಡದ ಬಹುತೇಕ ನ್ಯೂಸ್ ಚಾನಲ್ ಗಳು ಉಚಿತವಾಗಿ ಸಿಗಲಿವೆಯಾದರೂ ಪ್ರಸ್ತುತ ಟಿ.ವಿ. ವೀಕ್ಷಕರ ಆಸಕ್ತಿಯನ್ನು ಪರಿಗಣಿಸಿದರೆ, ಖಂಡಿತವಾಗಿಯೂ ಕೇಬಲ್ ದರ ಹೆಚ್ಚಾಗಿ ಪಾವತಿಸುವ ಅನಿವಾರ್ಯತೆ ಗ್ರಾಹಕರಿಗೆ ಖಚಿತ ಎಂದು ಅವರು ವಿವರಿಸಿದರು.
ಕೇಬಲ್ ಉದ್ದಿಮೆದಾರರು ಕಳೆದ 30 ವರ್ಷಗಳಿಂದ (ಮೊದಲ ಪುಟದಿಂದ) ಈ ವಹಿವಾಟು ನಡೆಸುತ್ತಿದ್ದು, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿನ ದರ ಹಾಗೂ ಚಾನಲ್‍ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೂ ಗರಿಷ್ಟ ರೂ. 300ರ ಬಾಡಿಗೆಗೆ ಸುಮಾರು 450 ಚಾನಲ್‍ಗಳನ್ನು ನೀಡುತ್ತಿದ್ದಾರೆ. ಇದೀಗ ಸ್ವತಂತ್ರ ಆಯ್ಕೆಯನ್ನು ಗ್ರಾಹಕರಿಗೆ ಬಿಟ್ಟರೂ ಉಚಿತ ಚಾನಲ್‍ಗಳು ಗ್ರಾಹಕರಿಗೆ ರುಚಿಸದು ಬದಲಿಗೆ ನಿರ್ದಿಷ್ಟ ದರ ಪಾವತಿಸಿ ಈಗಿನ ಮಕ್ಕಳು, ಆಧುನಿಕ ಸಮಾಜದ ಜನರ ಆಸಕ್ತಿಗೆ ತಕ್ಕ ಚಾನಲ್‍ಗಳನ್ನು ಪಡೆಯಬೇಕಾಗಿದ್ದು, ಇದು ದುಬಾರಿಯಾಗುವದು ನಿಸ್ಸಂಶನೀಯ ಎಂಬದು ಅವರ ವಾದ.
ಕೇವಲ ಕಾರ್ಪೋರೇಟ್ ಸಂಸ್ಥೆಗೆ ಮಣೆ ಹಾಕಲು ಟ್ರಾಯ್ ಇದಕ್ಕೆ ಮುಂದಾಗಿದೆ, ಇದರಿಂದಾಗಿ ಕೇಬಲ್ ಸಂಸ್ಥೆಯವರು, ಅವಲಂಬಿತರ ಬದುಕು ದುಸ್ತರವಾಗಲಿದೆ. ಗ್ರಾಹಕರಿಗೆ, ಸಮಸ್ಯೆಗಳು ಎದುರಾದಾಗ ನಿರೀಕ್ಷಿತ ಸೇವೆಯೂ ಸರಿಯಾಗಿ ಸಿಗುವದಿಲ್ಲ. ನಿಯಂತ್ರಣದ ಹೆಸರಿನ ಹೊಸ ನಿಯಮದ ಪರಿಣಾಮ ನಿಧಾನಗತಿ ಯಲ್ಲಿ ಗ್ರಾಹಕರಿಗೆ ಅರಿವಾಗಲಿದೆ ಎಂದು ಅವರು ಹೇಳಿದರು.
ಪತ್ರಿಕೆಗಳಲ್ಲೂ ವಿವಿಧ ಅಂಕಣಗಳು ಇರುತ್ತವೆ. ಇದರಂತೆ ಕೇಬಲ್ ಜಾಲವೂ ಸಹ, ಪತ್ರಿಕೆ ಓದುವದಾದರೆ, ಟಿ.ವಿ. ವೀಕ್ಷಣೆ ಮಾಡಲಾಗುತ್ತದೆ. ಆದರೆ ಪತ್ರಿಕೆ ಓದುಗರಿಗೆ ತೆರಿಗೆ ಇಲ್ಲ ಇದೀಗ ಚಾನಲ್ ವೀಕ್ಷಣೆಗೆ ಗ್ರಾಹಕರು ತೆರಿಗೆ ಪಾವತಿಸಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ರಾಜು ಅವರು, ಈ ವಿಚಾರದಲ್ಲಿ ಕೇಬಲ್ ಉದ್ದಿಮೆದಾರರ ವಾದವನ್ನು ಟ್ರಾಯ್ ಪರಿಗಣಿಸದೆ ಕೇವಲ ಕಾರ್ಪೋರೇಟ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾತ್ರ ಗಮನ ಹರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 80 ಲಕ್ಷ ಮನೆಗಳಲ್ಲಿ ಕೇಬಲ್ ಟಿ.ವಿ. ಸಂಪರ್ಕವಿದ್ದು, 17 ಸಾವಿರ ಆಪರೇಟರ್‍ಗಳಿದ್ದಾರೆ. ಕೇವಲ ಬೆಂಗಳೂರಿನಲ್ಲಿಯೇ 1800 ಆಪರೇಟರ್ಸ್ ಇದ್ದಾರೆ ಎಂದು ಮಾಹಿತಿ ನೀಡಿದ ಅವರು, ಫೆ. 1 ರಿಂದ ಜಾರಿಗೆ ತರಲು ಉದ್ದೇಶಿಸಿರುವ ನಿಯಮವನ್ನು ವಿರೋಧಿಸಿ ತಾ. 24 ರಂದು ದಕ್ಷಿಣ ಭಾರತದಾದ್ಯಂತ ಕೇಬಲ್ ಬಂದ್ ಮಾಡಿ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇದು ದೇಶಾದ್ಯಂತ ಹಬ್ಬಲಿದ್ದು, ಶಾಶ್ವತವಾಗಿ ಕೇಬಲ್ ಜಾಲ ಮುಚ್ಚುವ ಸಾಧ್ಯತೆಯಿರುವದಾಗಿ ತಿಳಿಸಿದರು.