ಮಡಿಕೇರಿ, ಜ. 20: ಜಾನಪದ ನೃತ್ಯ, ಕೋಲಾಟ, ಭಾವಗೀತೆ, ಜಾನಪದ ಗೀತೆ, ಭಜನೆ ಸ್ಪರ್ಧೆಗಳನ್ನೊಳಗೊಂಡು ಗಾಳಿಬೀಡುವಿನಲ್ಲಿ ಜಿಲ್ಲಾಮಟ್ಟದ ಯುವಜನ ಮೇಳ ಸಂಭ್ರಮದಿಂದ ನಡೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕು ಯುವ ಒಕ್ಕೂಟ, ಶ್ರೀ ಮಹಾಗಣಪತಿ ಸೇವಾ ಸಮಿತಿ ಗಾಳಿಬೀಡು, ಗಾಳಿಬೀಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಹಾಗೂ ಗಾಳಿಬೀಡು ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಗಾಳಿಬೀಡು ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಯುವಜನ ಮೇಳವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಶೋಭಾ ಮೋಹನ್, ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೆ ಯುವ ಜನಮೇಳದಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಬೆಳವಣಿಗೆ ಕಾಣಬೇಕೆಂದು ಕಿವಿಮಾತು ಹೇಳಿದರು. ಅತಿಥಿಗಳಾಗಿದ್ದ ರಾಜ್ಯ ಯುವ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಮಾತನಾಡಿ, ಯುವ ಜನಮೇಳ ಎಂಬದು ಯುವ ಜನಾಂಗಕ್ಕೆ ಹಬ್ಬವಿದ್ದಂತೆ. ಆದ್ದರಿಂದ ಯುವ ಜನತೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಯುವ ಒಕ್ಕೂಟ ಮಾಡುವಂತಾಗ ಬೇಕೆಂದರು.

ಗಾಳಿಬೀಡುವಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ, ಯುವ ಜನತೆ ದೇಶದ ಸಂಪತ್ತು ಎಂದರಲ್ಲದೆ, ಸತ್ಚಿಂತನೆಯೊಂದಿಗೆ ಸನ್ಮಾರ್ಗದಲ್ಲಿ ಯುವ ಜನತೆ

(ಮೊದಲ ಪುಟದಿಂದ) ನಡೆದರೆ ದೇಶ ಕೂಡ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಅಭಿಪ್ರಾಯಿಸಿದರು. ಅಧ್ಯಕ್ಷತೆ ವಹಿಸಿದ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ ಸೋಮಯ್ಯ ಮಾತನಾಡಿ, ದೇಶ ಕಟ್ಟುವ ಕೆಲಸದಲ್ಲಿ ಯುವ ಜನಾಂಗ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಗಾಳಿಬೀಡು ಗ್ರಾ.ಪಂ. ಉಪಾಧ್ಯಕ್ಷೆ ರಾಣಿ ಮುತ್ತಣ್ಣ, ಸದಸ್ಯರಾದ ಕುಮಾರಿ ಸುಭಾಶ್ ಆಳ್ವಾ, ಮೂರು ತಾಲೂಕು ಒಕ್ಕೂಟಗಳ ಅಧ್ಯಕ್ಷರುಗಳು ಇತರರು ಉಪಸ್ಥಿತರಿದ್ದರು.

ನವೀನ್ ದೇರಳ ನಿರೂಪಿಸಿ, ಇಂದುಮತಿ ಪ್ರಾರ್ಥಿಸಿದರು. ಗಾಳಿಬೀಡು ಯುವಕ ಸಂಘದ ಅಧ್ಯಕ್ಷ ಗಿರೀಶ್ ಸ್ವಾಗತಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ವಂದಿಸಿದರು.