ಶನಿವಾರಸಂತೆ, ಜ. 18: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಹುಲು ಕೋಡು ಗ್ರಾಮದ ಸುಮಾರು 400 ವರ್ಷ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ದೇವಾಲಯದಿಂದ ಬಾಣಂತಮ್ಮನ 4ನೇ ಮಗ ಶ್ರೀ ಕುಮಾರಲಿಂಗೇಶ್ವರ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿರಿಸಿ ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಜಾತ್ರಾ ಬನಕ್ಕೆ ಗುಡಿಯಲ್ಲಿರಿಸಿ ಪೂಜಿಸಲಾಯಿತು. ಭಕ್ತರು ಹಣ್ಣು ಕಾಯಿ ಮಾಡಿಸಿ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಶನಿವಾರಸಂತೆ, ಕೊಡ್ಲಿಪೇಟೆ, ತಾಳೂರು, ಮಣಗಲಿ, ಕಿತ್ತೂರು, ಹಂಡ್ಲಿ, ಹೆಬ್ಬುಲುಸೆ, ಬಿಡಳ್ಳಿ, ಶಾಂತಳ್ಳಿ, ಕುಂದಳ್ಳಿ ಹಾಗೂ ನೆರೆಯ ಹಾಸನ ಜಿಲ್ಲೆಯಿಂದಲೂ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಕ್ರಾಂತಿಯ ಹಬ್ಬದ 2ನೇ ದಿನ ನಡೆದ ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗಿ ದೇವಸ್ಥಾನಕ್ಕೆ ತೆರಳಲಾಯಿತು. ಜಾತ್ರಾ ಸೇವಾ ಸಮಿತಿಯ ಅಧ್ಯಕ್ಷ ಪಾಪಣ್ಣ, ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಪೂಜಾ ಕಾರ್ಯಕ್ರಮ ದಲ್ಲಿ ಹಾಜರಿದ್ದರು. ಶನಿವಾರಸಂತೆ ಪೊಲೀಸ್ ಠಾಣೆಯ ಪ್ರಬಾರ ಎಸ್‍ಐ ಚೆಲುವ ರಾಜ್, ಸಹಾಯಕ ಠಾಣಾಧಿಕಾರಿ ಗಳಾದ ಹೆಚ್.ಎಂ. ಗೋವಿಂದ್, ನಂಜುಂಡೇಗೌಡ ಹಾಗೂ ಸಿಬ್ಬಂದಿಗಳು ಶಾಂತಿ ಸುವ್ಯವಸ್ಥೆ ಏರ್ಪಡಿಸಿದ್ದರು.