ಕೂಡಿಗೆ, ಜ. 16: ಸೋಮವಾರಪೇಟೆ ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಭತ್ತದ ಖರೀದಿ ಕೇಂದ್ರವನ್ನು ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಘಟಕವೊಂದರಲ್ಲಿ ತೆರೆಯಲಾಗಿದೆ. ಸೋಮವಾರಪೇಟೆ ತಾಲೂಕಿನ ರೈತರು ತಾವು ಬೆಳೆದ ಭತ್ತವನ್ನು ಸರ್ಕಾರದ ಬೆಂಬಲಿತ ಬೆಲೆಗೆ ಕೊಡಲು ಅವಕಾಶವಿದೆ. ಅದರಂತೆ ರಾಜ್ಯ ಸರ್ಕಾರದ ತೀರ್ಮಾನದಂತೆ ಭತ್ತ ಖರೀದಿಗೆ ರೈತರ ಹೆಸರು ನೊಂದಾವಣೆಗೆ ಫೆ. 28 ರವರೆಗೆ ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸೋಮವಾರಪೇಟೆ ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಕುಶಾಲನಗರದಲ್ಲಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳಲ್ಲಿ 216 ರೈತರು ನೋಂದಾಯಿಸಿದ್ದು, ಫೆ. 28 ರವರೆಗೆ ಹೆಸರು ನೋಂದಾಯಿಸಲು ಅವಕಾಶ ನೀಡಿದ್ದು, ರೈತರು ತಮ್ಮ ಜಮೀನಿನ ಆರ್‍ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಗ್ರಾಮ ಲೆಕ್ಕಿಗರಿಂದ ಆದ ಬೆಳೆ ದೃಢೀಕರಣ ಪತ್ರದ ನಕಲುಗಳನ್ನು ಭತ್ತ ಖರೀದಿ ಕೇಂದ್ರಕ್ಕೆ ನೀಡಿ ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿದ ರೈತರ ಭತ್ತವನ್ನು ಮಾರ್ಚ್ 31 ರವರೆಗೆ ಸಮೀಪದ ರೈಸ್ ಮಿಲ್‍ಗಳಿಗೆ ನೀಡಲು ವ್ಯವಸ್ಥೆಯನ್ನು ಮಾಡಿದೆ ಎಂದು ಭತ್ತ ಖರೀದಿ ಕೇಂದ್ರದ ಗುಣಮಟ್ಟದ ಅಧಿಕಾರಿ ಮನೋಹರ್ ತಿಳಿಸಿದ್ದಾರೆ.