ಒಡೆಯನಪುರ, ಜ. 16: ಶನಿವಾರಸಂತೆ ರೋಟರಿ ಕ್ಲಬ್ ವತಿ ಯಿಂದ ಸಮೀಪದ ಶನಿವಾರಸಂತೆ ಗುಂಡೂ ರಾವ್ ಬಡಾವಣೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಶಾಸ್ಪೂರ್ತಿ ಕಾರ್ಯಕ್ರಮದಡಿಯಲ್ಲಿ ಬ್ಯಾಗ್, ಟೂತ್‍ಪೇಸ್ಟ್, ಶ್ಯಾಂಪೂ, ಬಿಸ್ಕತ್, ನೀರಿನ ಬಾಟಲ್ ಮುಂತಾದ ದಿನ ಬಳಕೆ ವಸ್ತು, ಸಾಮಗ್ರಿಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತಮ್, ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ಇಲ್ಲಿಯ ವರೆಗೆ ಸ್ವಚ್ಛತೆ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಆರ್ಥಿಕ ನೆರವು ಸೇರಿದಂತೆ ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಹಾರ ಪದಾರ್ಥ ವಿತರಣೆ, ಮಕ್ಕಳಿಗೆ ಆಟ ಆಡಲು ಕ್ರೀಡಾ ಸಾಮಗ್ರಿಗಳು ಹಾಗೂ ಬೆಂಚು, ಬ್ಯಾಗ್ ಮುಂತಾದ ಅಗತ್ಯ ವಸ್ತು ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಂದರು. ರೋಟರಿ ಸಂಸ್ಥೆ ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಉಪಯೋಗ ಕಾರ್ಯವನ್ನು ಮಾಡುತ್ತಿದ್ದು ಸಮಾಜ ಸೇವೆ ಮೂಲಕ ಜನರ ಮೆಚ್ಚುಗೆಗಳಿಸಿದೆ ಎಂದರು.

ಶನಿವಾರಸಂತೆ ಗ್ರಾ.ಪಂ. ಸದಸ್ಯ, ಉದ್ಯಮಿ ಸರ್ದಾರ್ ಆಹಮದ್ ಮಾತನಾಡಿ, ರೋಟರಿ ಸಂಸ್ಥೆ ಹಾಗೂ ಸಂಸ್ಥೆಯ ಪದಾಧಿಕಾರಿಗಳ ಸಮಾನ ಚಿಂತನೆ ಮತ್ತು ಒಗ್ಗೂಡುವಿಕೆಯಿಂದ ಉತ್ತಮವಾಗಿ ಸಮಾಜ ಸೇವೆಯಾಗುತ್ತಿದೆ. ಈ ಸಾಮಾಜಿಕ ಚಟುವಟಿಕೆಗಳ ಬೆಳವಣಿಗೆಯಿಂದ ಸಮಾಜದಲ್ಲಿ ಇತರರಿಗೆ ಮಾದರಿಯಾಗಿದೆ, ಅದೆ ರೀತಿಯಲ್ಲಿ ರೋಟರಿ ಸಂಸ್ಥೆ ಸ್ವಚ್ಛತೆ, ಆರೋಗ್ಯ, ಶಿಕ್ಷಣದ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವದು ಶ್ಲಾಘನೀಯ ಎಂದರು.

ಈ ಸಂದರ್ಭ ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ನಿಕಟಪೂರ್ವ ಅಧ್ಯಕ್ಷ ಹೆಚ್.ವಿ. ದಿವಾಕರ್, ನಿಯೋಜಿತ ಅಧ್ಯಕ್ಷ ಸುಬ್ಬು, ನಿಯೋಜಿತ ಕಾರ್ಯದರ್ಶಿ ಹೆಚ್.ಪಿ. ಚಂದನ್, ಮಾಜಿ ಕಾರ್ಯದರ್ಶಿ ಹೆಚ್.ಎಸ್. ಸಾಗರ್, ಗ್ರಾ.ಪಂ. ಸದಸ್ಯ ಎನ್.ಎ. ಆದಿತ್ಯ, ಹೆಚ್.ಎಸ್. ಯಶ್ವಂತ್ ಮುಂತಾದವರು ಇದ್ದರು.