ಮಡಿಕೇರಿ, ಜ. 16: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲಭವನ ಬೆಂಗಳೂರು ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 8ನೇ ತರಗತಿಯ ವಿದ್ಯಾರ್ಥಿ ಪಿ.ಎನ್. ಮೋಕ್ಷ್ ಸೃಜನಾತ್ಮಕ ಕಲೆಯ ಸ್ಪರ್ಧೆಯಲ್ಲಿ; ಸ್ಥಳದಲ್ಲಿಯೇ ಜೇಡಿಮಣ್ಣಿನ ಆಕೃತಿ ರಚನೆ, ಚಿತ್ರಕಲೆ ಹಾಗೂ ಕ್ರಾಫ್ಟ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ‘ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾನೆ.

ಈತ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕಿರಿಯ ಕಲಾವಿದ. ಈ ಪ್ರಶಸ್ತಿಯು ರೂ. 5,000, ಪ್ರಶಸ್ತಿ ಪತ್ರ ಹಾಗೂ ಬೆಳ್ಳಿಯ ದೀಪವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ, ಬಾಲಭವನ ಸೊಸೈಟಿ ನಿರ್ದೇಶಕಿ ರತ್ನಾ ಕಲಮದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ ಮರಿಸ್ವಾಮಿ ಪ್ರದಾನ ಮಾಡಿದರು. ಈತ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ‘ಬಾಲಶ್ರೀ’ ಪ್ರಶಸ್ತಿಯ ಶಿಬಿರಕ್ಕೂ ಆಯ್ಕೆಯಾಗಿದ್ದಾನೆ. ಭಾರತೀಯ ವಿದ್ಯಾಭವನದ ಕಲಾವಿದ ಟಿ.ಬಿ. ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾನೆ. ಪಿ.ಎನ್. ಮೋಕ್ಸ್ ಮಡಿಕೇರಿಯ ಪುಟಾಣಿನಗರದ ನಿವಾಸಿ ಪಾಣತ್ತಲೆ ಪ್ರಿನ್ಸ್ ನಂದಕುಮಾರ್ ಹಾಗೂ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಾಪಕಿ ಜಯಶ್ರೀ ಟಿ. ಅವರ ಪುತ್ರ.