ಮಡಿಕೇರಿ, ಜ. 14: ಮಹಿಳಾ ಸ್ವಸಹಾಯ ಸಹಕಾರ ಸಂಘಗಳನ್ನು ಬಲಪಡಿಸುವಲ್ಲಿ ಮಹಿಳೆಯರು ಮುಂದಾಗಬೇಕು ಎಂದು ಜಿಲ್ಲಾ ಸಹಕಾರಿ ಪ್ರಶಸ್ತಿ ಪುರಸ್ಕøತರಾದ ಉಷಾ ತೇಜಸ್ವಿ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗೆ ಸಂಘಗಳ ಅಭಿವೃದ್ಧಿ ಹಾಗೂ ಸಹಕಾರ ಕಾಯ್ದೆ, ನಿಯಮದ ಕುರಿತು ನಡೆದ ತರಬೇತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಸಹಾಯ ಸಹಕಾರ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕಾನೂನು ಮತ್ತು ಶಿಕ್ಷಣದ ಬಗ್ಗೆ ತಿಳುವಳಿಕೆ ಅತೀ ಮುಖ್ಯ. ಆ ದಿಸೆಯಲ್ಲಿ ಪ್ರತಿಯೊಬ್ಬ ಮಹಿಳೆಯರೂ ಸ್ವಸಹಾಯ ಸಹಕಾರ ಸಂಘಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ನುಡಿದರು.

ಸ್ವಸಹಾಯ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ಸಹಕಾರಿ ಯಾಗಿದ್ದು, ಆರ್ಥಿಕವಾಗಿ ಸಬಲ ರಾಗುವದರ ಜೊತೆಗೆ ಸ್ವಾವಲಂಬಿ ಬದುಕು ನಡೆಸಲು ಸಾಧ್ಯ ಎಂದು ಉಷಾ ತೇಜಸ್ವಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಇನ್ನಷ್ಟು ಪಾಲ್ಗೊಳ್ಳು ವಂತಾಗಬೇಕು ಎಂದು ಸಲಹೆ ಮಾಡಿದರು. ವೀರಾಜಪೇಟೆಯಲ್ಲಿ 1941 ರಲ್ಲಿಯೇ ಪ್ರಥಮ ಮಹಿಳಾ ಸ್ವಸಹಾಯ ಸಂಘ ಆರಂಭವಾಗಿ ರುವದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಹಕಾರ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿರುವದು ಒಳ್ಳೆಯ ಬೆಳವಣಿಗೆ. ಇದರಿಂದ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. ಹಾಗೆಯೇ ಸ್ವಸಹಾಯ ಸಹಕಾರ ಸಂಘಗಳ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಇಡೀ ವಿಶ್ವ ಒಂದು ಹಳ್ಳಿಯಾ ಗಿದ್ದು, ಇಡೀ ದೇಶವೇ ಮಹಿಳಾ ಪ್ರಧಾನ ಸಮಾಜವಾಗುತ್ತಿದೆ. ಪ್ರತೀ ವಾರ ಸಮಿತಿ ಸಭೆ ನಡೆಸಿ ಸ್ವಸಹಾಯ ಸಹಕಾರ ಸಂಘ ಬಲಪಡಿಸಲು ಶ್ರಮಿಸಬೇಕು ಎಂದು ಮನು ಮುತ್ತಪ್ಪ ಅವರು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ, ತಾ.ಪಂ. ಅಧ್ಯಕ್ಷರು, ಹೀಗೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ಇರುವದು ಕಾಣಬಹುದಾಗಿದೆ ಎಂದರು.

ಸಹಕಾರ ಯೂನಿಯನ್ ನಿರ್ದೇಶಕ ರವಿಬಸಪ್ಪ, ತಮ್ಮಯ್ಯ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಸಹಕಾರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಪುಟ್ಟಸ್ವಾಮಿ, ಡಿಸಿಸಿ ಬ್ಯಾಂಕ್‍ನ ನೋಡಲ್ ಅಧಿಕಾರಿ ತುಂಗರಾಜು ಇತರರು ಇದ್ದರು. ಯೂನಿಯನ್ ಬ್ಯಾಂಕ್‍ನ ಮಂಜುಳ ಪ್ರಾರ್ಥಿಸಿದರು. ಯೂನಿಯನ್ ಬ್ಯಾಂಕ್‍ನ ಸಿಇಓ ಯೋಗೇಂದ್ರ ನಾಯಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.