ಸೋಮವಾರಪೇಟೆ, ಜ. 16: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೀಡಾಗಿದ್ದ ಮಾದಾಪುರ ಕಲ್ಲುಕೋರೆ ಶ್ರೀಚೌಂಡಿಯಮ್ಮ ಮತ್ತು ಶ್ರೀ ಗುಳಿಗಪ್ಪ ದೈವಸ್ಥಾನವನ್ನು ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಪುನರ್ ನಿರ್ಮಾಣಗೊಳಿಸಲಾಗಿದ್ದು, ನೂತನ ದೇವಾಲಯದ ಲೋಕಾರ್ಪಣೆ ಮತ್ತು ಹಿಂದೂ ಐಕ್ಯ ಸಮ್ಮೇಳನ ತಾ. 27 ರಂದು ನಡೆಯಲಿದೆ.

ಜೀರ್ಣೋದ್ಧಾರದ ಅಂಗವಾಗಿ ತಾ. 26 ರಂದು ಪೂರ್ವಾಹ್ನ 7 ಗಂಟೆಗೆ ದೇವಾಲಯದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ, ರಾತ್ರಿ 7 ಗಂಟೆಗೆ ದೇವಿ ಪೂಜೆ, ಮಂಗಳಪೂಜೆ, ತಾ. 27ರಂದು ಪೂರ್ವಾಹ್ನ 7 ಗಂಟೆಗೆ ಗಣಪತಿ ಹೋಮ, 9.30ಕ್ಕೆ ಶ್ರೀದೇವಿ ಹಾಗೂ ದೈವದ ಪ್ರತಿಷ್ಠಾಪನೆ, ಸಂಜೆ 7 ಗಂಟೆಗೆ ದೇವಿಪೂಜೆ ಆಯೋಜಿಸಲಾಗಿದೆ.

ತಾ. 27 ರಂದು ಬೆಳಗ್ಗೆ 10.30ಕ್ಕೆ ಗರ್ವಾಲೆ ರಸ್ತೆಯ ಕಲ್ಲುಕೋರೆ ದೇವಸ್ಥಾನದಿಂದ ಮಾದಾಪುರ ಎಸ್‍ಜೆಎಂ ಶಾಲಾ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, 11.30ಕ್ಕೆ ಶಾಲಾ ಮೈದಾನದಲ್ಲಿ ಹಿಂದೂ ಐಕ್ಯ ಸಮ್ಮೇಳನ ಆಯೋಜಿಸಲಾಗಿದೆ.

ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಹಿಂದೂ ಐಕ್ಯ ವೇದಿಕೆಯ ಕೇರಳ ರಾಜ್ಯದ ಪ್ರಧಾನ ಕಾರ್ಯದರ್ಶಿ ಡಾ. ಬ್ರಹ್ಮಚಾರಿ ಭಾರ್ಗವರಾಮ್, ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ, ಕಾಫಿ ಬೆಳೆಗಾರ ಎಂ.ಬಿ. ಮಧು ಬೋಪಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಟಿ. ಸುಭಾಷ್ ತಿಮ್ಮಯ್ಯ ತಿಳಿಸಿದ್ದಾರೆ.