ಕುಶಾಲನಗರ, ಜ. 14: ಕುಶಾಲನಗರ ಹೋಬಳಿ ಮಟ್ಟದ ಸರಕಾರಿ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಸದಸ್ಯರ 2 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ತರಬೇತಿ ಕಾರ್ಯಾಗಾರದ ಜಿಲ್ಲಾ ನೋಡಲ್ ಅಧಿಕಾರಿ ಕೂಡಿಗೆ ಡಯಟ್ ಉಪನ್ಯಾಸಕ ಸಿದ್ದೇಶ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಯಂ ಕಲಿಕೆಯತ್ತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವದು ಶಿಕ್ಷಕರ ಕರ್ತವ್ಯವಾಗಿದೆ. ಶಾಲೆಯಲ್ಲಿ ಶಿಕ್ಷಕರ ಬೋಧನೆಯಿಂದ ದೊರೆಯುವ ಶಿಕ್ಷಣಕ್ಕಿಂತ ಜೀವನದ ಆಗುಹೋಗುಗಳು, ಅನುಭವದಿಂದ ದೊರೆತ ಜ್ಞಾನ ಸದಾ ಕಾಲ ನೆಲೆಸಲಿದೆ. ಈ ನಿಟ್ಟಿನಲ್ಲಿ ಒತ್ತಡದ ಬೋಧನೆಗಿಂತ ವಿದ್ಯಾರ್ಥಿಗಳನ್ನು ಸ್ವಯಂ ಕಲಿಕೆಯತ್ತ ಹೆಚ್ಚು ಆಕರ್ಷಿಸುವಂತಹ ಕೆಲಸ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್ ಮಾತನಾಡಿ, ಯಾವದೇ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ನಡುವಿನ ಹೊಂದಾಣಿಕೆ, ಉತ್ತಮ ಬಾಂಧ್ಯವ ಅಗತ್ಯವಿದೆ. ಶಾಲಾಭಿವೃದ್ಧಿ ಸಮಿತಿಯ ಬಹುತೇಕ ಸದಸ್ಯರಿಗೆ ಸರಕಾರದ ಯೋಜನೆಗಳು, ಸೌಲಭ್ಯದ ಬಗ್ಗೆ ಮಾಹಿತಿ ಕೊರತೆಯಿದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಶಾಲೆಯ ಪ್ರತಿಯೊಂದು ಸಭೆಗಳಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಪಡೆಯುವಂತೆ ಕರೆ ನೀಡಿದರು.
ಬಾಲಕಿಯರ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಮಾತನಾಡಿದರು. ಬಿಆರ್ಪಿ ಲೋಕೇಶ್ ಸೇರಿದಂತೆ ವಿವಿಧ ಶಾಲೆಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು ಪಾಲ್ಗೊಂಡಿದ್ದರು.