ಗೋಣಿಕೊಪ್ಪಲು, ಜ.16: ತಾ.17ರಂದು ಏಕಮುಖ ಸಂಚಾರಕ್ಕೆ ಸಂಬಂಧಿಸಿದಂತೆ ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಬೇಕೆಂದು ಕೋರಿ ವಾಟ್ಸಾಪ್ ಸಂದೇಶಗಳು, ಸಹಿ ಇಲ್ಲದ ಮನವಿ ಪತ್ರಗಳು, ಹರಿದಾಡುತ್ತಿದೆ. ಈ ಬಂದ್ಗೆ ಸಂಬಂಧಿಸಿದಂತೆ ಚೇಂಬರ್ ಆಫ್ ಕಾಮರ್ಸ್ನಿಂದ ಯಾವದೇ ತೀರ್ಮಾನವನ್ನು ಕೈಗೊಂಡಿರುವದಿಲ್ಲ ಮತ್ತು ಬಂದ್ಗೆ ಕರೆ ನೀಡಿರುವದಿಲ್ಲ. ಎಂದು ಗೋಣಿಕೊಪ್ಪ ಚೇಂಬರ್ನ ಅಧ್ಯಕ್ಷ ಸುನಿಲ್ ಮಾದಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂದ್ಗೆ ವಿರೋಧ
ಗೋಣಿಕೊಪ್ಪಲು ಏಕ ಮುಖ ಸಂಚಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಪೊನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ತಾ. 17 ರಂದು (ಇಂದು) ಗೋಣಿಕೊಪ್ಪಲು ವ್ಯಾಪಾರಸ್ಥರ ಹೆಸರಿನಲ್ಲಿ ಏಕಮುಖ ಸಂಚಾರ ರದ್ಧತಿಗೆ ಒತ್ತಾಯಿಸಿ ನಡೆಸುತ್ತಿರುವ ಬಂದ್ಗೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ತಿಳಿಸಿದ್ದಾರೆ
ಪೊನ್ನಂಪೇಟೆ ವರ್ತಕರ ಸಂಘದ ಅಧ್ಯಕ್ಷ ಸಿ.ಕೆ.ಉತ್ತಪ್ಪ ಅವರು ಮಾತನಾಡಿ, ಇದೀಗ ಅಚ್ವುಕಟ್ಟು ಪೊಲೀಸ್ ವ್ಯವಸ್ಥೆಯೊಂದಿಗೆ ಯಾವದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ನಗರದ ಮುಖ್ಯರಸ್ತೆ ನಿರಾಳವಾಗಿದೆ. ಗೋಣಿಕೊಪ್ಪಲಿನ ಹಲವು ವರ್ತಕರು, ಸಾರ್ವಜನಿಕರು ಬಂದ್ಗೆ ವಿರೋಧವಿರುವದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಬಂದ್ ರದ್ದಾದರೆ ವರ್ತಕರಲ್ಲಿ ಸಹಮತ ಮೂಡಲು ಸಾಧ್ಯ ಎಂದು ಹೇಳಿದರು.
ಈಗಾಗಲೇ ಗೋಣಿಕೊಪ್ಪಲು ಏಕಮುಖ ರಸ್ತೆ ಸಂಚಾರ ಮುಂದುವರಿಸಲು ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ವರ್ತಕ ಪ್ರಮುಖರಾದ ಸಿ.ಡಿ.ಮಾದಪ್ಪ , ಕೇಶವ ಕಾಮತ್ ಮುಂತಾದವರು ಎಸ್.ಪಿ.ಗೆ ಲಿಖಿತ ಮನವಿ ನೀಡಿ ಒತ್ತಾಯಿಸಿದ್ದಾರೆ.