ಸಿದ್ದಾಪುರ, ಜ. 14: ಕಾಡಾನೆ ಹಾಗೂ ಹುಲಿಗಳ ಹಾವಳಿಯಿಂದ ತತ್ತರಿಸಿದ ಸಿದ್ದಾಪುರ ವ್ಯಾಪ್ತಿಯಲ್ಲಿ ಇದೀಗ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯ ಸಮೀಪದ ಕಾಫಿ ತೋಟಗಳ ಬಳಿ ಚಿರತೆ ಹಾಗೂ ಅದರ 2 ಮರಿಗಳು ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಆರ್.ಆರ್.ಟಿ. ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖಾಧಿಕಾರಿಗಳು ಇದು ಚಿರತೆಯ ರೀತಿಯ ಬೆಕ್ಕಾಗಿರಬಹುದೆಂದು ಶಂಕಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ರೆಜಿತ್ ಕುಮಾರ್ ಭೇಟಿ ನೀಡಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದರು.