ಮಡಿಕೇರಿ, ಜ. 16: ಮಾತೃ ಭೂಮಿ, ಭರತ ಖಂಡದ ರಕ್ಷಣೆ, ಭಾರತಾಂಬೆಯ ಜನತೆಯ ಸುಭದ್ರತೆಯ ವಿಚಾರ ಬಂದಾಗ ಮೊದಲು ಬರುವದು ಹೆಮ್ಮೆಯ ಭಾರತೀಯ ಸೇನೆ. ಸೈನಿಕರು ಆಂತರಿಕವಾಗಿ ದೇಶದಲ್ಲಿ ಹತ್ತು ಹಲವಾರು ದಿನಾಚರಣೆಗಳು ಇವೆ. ಆದರೆ ಬಹುಶಃ ಇವೆಲ್ಲವಕ್ಕೂ ರಕ್ಷಣಾ ಬೇಲಿಯಾಗಿರುವ ಭಾರತೀಯ ಸೇನೆಗೂ ಒಂದು ನಿರ್ದಿಷ್ಟವಾದ ದಿನಾಚರಣೆ ಇದೆ. ರಕ್ಷಣಾ ಪಡೆಗೆ ಸಂಬಂಧಿಸಿದಂತೆ ಪ್ರಸ್ತುತ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಈ ಮೂರು ವಿಭಾಗಗಳಿದ್ದು, ಈ ಮೂರು ವಿಭಾಗದ ರಕ್ಷಣಾ ಪಡೆಗಳ ದಿನಾಚರಣೆ ಬೇರೆ ಬೇರೆ ದಿನಗಳಲ್ಲಿದೆ. ಆದರೆ ಭಾರತ ಸ್ವತಂತ್ರವಾದ ಬಳಿಕ ಮೊದಲು ಆಚರಿಸಲ್ಪಟ್ಟಿರುವದು ಆರ್ಮಿ ಡೇ. ಸೇನಾ ದಿನಾಚರಣೆ ಈ ಆರ್ಮಿ ಡೇ ಸೈನಿಕರ ನಾಡೆಂದು ಗುರುತಿಸಿಕೊಂಡಿರುವ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗಿನ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬ್ರಿಟಿಷರ ಆಡಳಿತ ಮುಕ್ತಿಗೊಂಡು ಬ್ರಿಟಿಷ್ ಆಡಳಿತದ ಬಳಿಕ ಭಾರತೀಯ ರಕ್ಷಣಾ ಪಡೆಯ ಪ್ರಪ್ರಥಮ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡವರು ಈ ಕೊಡಗು ಜಿಲ್ಲೆಯ ಧೀಮಂತ ವ್ಯಕ್ತಿಯಾದ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಎಂಬವದು ಇತಿಹಾಸ.

ಇವರು ಆಗಿನ ಬ್ರಿಟಿಷ್ ಆರ್ಮಿ ಜನರಲ್ ಆಗಿದ್ದ ರಾಯ್‍ಬುಚರ್ ಅವರಿಂದ ಅಧಿಕಾರದ ಪದಗ್ರಹಣ ವಹಿಸಿಕೊಂಡಿದ್ದು, 1949ರ ಜನವರಿ 15 ರಂದು. ಈ ದಿನವನ್ನು ನಂತರದ ವರ್ಷಗಳಲ್ಲಿ ‘ಆರ್ಮಿ ಡೇ’ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ಮೂಲಕ ದೇಶರಕ್ಷಕರ ಸ್ಮರಣೆಯೊಂದಿಗೆ ಅವರ ಕರ್ತವ್ಯವನ್ನು ಸ್ಮರಿಸಲಾಗುತ್ತದೆ.

ಭಾರತದ ರಕ್ಷಣಾ ಪಡೆಗಳ ಮೂರು ವಿಭಾಗಗಳ ಏಕಮಾತ್ರ ಮಹಾದಂಡನಾಯಕ (ಕಮಾಂಡರ್ ಇನ್‍ಚೀಫ್) ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿರುವ ಆರ್ಮಿ ಪೆರೇಡ್ ಗ್ರೌಂಡ್‍ನಲ್ಲಿ ಮೂರು ವಿಭಾಗಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೀಗ ಎರಡು ವರ್ಷಗಳ ಹಿಂದೆ ಈ ಮೈದಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪೆರೇಡ್ ಗ್ರೌಂಡ್ ಎಂದು ನಾಮಕರಣ ಮಾಡಲಾಗಿದೆ.

ಕೊಡಗಿನ ವ್ಯಕ್ತಿ ಅಧಿಕಾರ ಸ್ವೀಕರಿಸಿದ ದಿನದಂದು ಹಾಗೂ ಇದೇ ವ್ಯಕ್ತಿಯ ಹೆಸರಿನ ಮೈದಾನದಲ್ಲಿ ಪ್ರತಿಷ್ಠಿತವಾದ, ಶಿಸ್ತು ಬದ್ಧವಾದ ‘ಆರ್ಮಿ ಡೇ’ ಜನವರಿ 15 ರಂದು ಆಚರಿಸಲ್ಪಡುತ್ತಿರುವದು ನಿಜಕ್ಕೂ ಕರ್ನಾಟಕ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಮಟ್ಟಿಗೆ ಅತ್ಯಂತ ಹೆಮ್ಮೆಯ ಮತ್ತು ಪ್ರೇರಣಾತ್ಮಕವಾದ ವಿಚಾರವಾಗಿದೆ.

71ನೇ ಸೇನಾ ದಿನ

ಮುಖ್ಯವಾಗಿ ರಾಷ್ಟ್ರದ ರಾಜಧಾನಿ ಹಾಗೂ ಎಲ್ಲಾ ಸೇನಾ ಕೇಂದ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 2019ರ ಜನವರಿ 15 ರಂದು 71ನೇ ಯ ಸೇನಾ ದಿನಾಚರಣೆ ಅರ್ಥಗರ್ಭಿತವಾಗಿ ಆಚರಿಸಲ್ಪಟ್ಟಿದೆ. ದೆಹಲಿಯ ಕೆ.ಎಂ. ಕಾರ್ಯಪ್ಪ ಪೆರೇಡ್ ಗ್ರೌಂಡ್‍ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್‍ರಾವತ್ ಸೇರಿದಂತೆ, ಏರ್‍ಚೀಫ್ ಮಾರ್ಷಲ್ ಬಿ.ಎಸ್. ಧಾನೋವ್, ಅಡ್ಮಿರಲ್ ಸುನಿಲ್ ಲಾಂಬಾ ಸೇರಿದಂತೆ ಸೇನೆಯ ಬಹುತೇಕ ಮುಖ್ಯಸ್ಥರು, ಸೇನಾ ಪರಿವಾರದವರು, ವೀರ ನಾರಿಯರು ಪಾಲ್ಗೊಂಡಿದ್ದರು.

ಸೇನಾ ಪ್ರದರ್ಶನ

ಭೂ ಸೇನೆಯ ಮುಖ್ಯಸ್ಥ ಬಿಪಿನ್‍ರಾವತ್‍ರೊಂದಿಗೆ ಅತಿಥಿಗಳಾಗಿ ಆಗಮಿಸುವ ವಾಯುಸೇನಾ ಮುಖ್ಯಸ್ಥರಾದ ವಿ.ಎಸ್. ಧಾನವ, ನೌಕಾ ಪಡೆಯ ಮುಖ್ಯಸ್ಥ ಸುನಿಲ್ ಲಾಂಬಾ ಉಪಸ್ಥಿತಿಯಲ್ಲಿ ಸೇನೆಯ ವೈವಿಧ್ಯಮಯವಾದ ಸಾಹಸ ಪ್ರದರ್ಶನಗಳು, ಅತ್ಯಾಕರ್ಷಕವಾದ ಶಿಸ್ತು ಬದ್ಧವಾದ ಪಥಸಂಚಲನ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ದೇಶದ ರಕ್ಷಣಾ ಪಡೆಯ ಶಕ್ತಿ ಪ್ರದರ್ಶನ ದೊಂದಿಗೆ ಮುಂಬರಲಿರುವ ಗಣರಾಜ್ಯೋತ್ಸವ ಸಿದ್ಧತೆಯ ಕಾರ್ಯಕ್ರಮಗಳೂ ಇಲ್ಲಿ ಪ್ರದರ್ಶಿಸಲ್ಪಟ್ಟಿವೆ.

ವಿವಿಧ ವಿಭಾಗದ ಸೇನಾ ತುಕಡಿಗಳ ಪಥಸಂಚಲನ, ಅಶ್ವಾರೋಹಿದಳ, ಬೈಕ್‍ಸ್ಟಂಟ್, ಹೆಲಿಕಾಪ್ಟರ್ ಮೂಲಕದ ಸಾಹಸ, ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ನಿಭಾಯಿಸಿ ಶಾಂತಿ - ಸುಭದ್ರತೆ ಕಾಪಾಡುವ ನಿಟ್ಟಿನಲ್ಲಿ ಸೈನಿಕರು ತೋರುವ ಕೆಚ್ಚೆದೆಯ ಹೋರಾಟದ ಪ್ರದರ್ಶನಗಳನ್ನು ಅಸಂಖ್ಯಾತ ಮಂದಿ ವೀಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಸೇನೆಯಲ್ಲಿನ ಸಾಹಸ- ವೀರತ್ವಕ್ಕಾಗಿ ನೀಡುವ ಸೇನಾ ಮೆಡಲ್, ಗ್ಯಾಲಂಟರಿ ಅವಾರ್ಡ್‍ಗಳನ್ನು ಅಂತಹವರಿಗೆ ಹಾಗೂ ವೀರ ನಾರಿಯರಿಗೆ ಪ್ರದಾನ ಮಾಡಲಾಯಿತು. ಈ ದಿನಾಚರಣೆಯ ಸಂದರ್ಭದಲ್ಲಿ ಸೇನೆಯಲ್ಲಿನ ಶಿಸ್ತು ಕೂಡ ಪರಿಚಯಿಸಲ್ಪಡುತ್ತದೆ.

ಸೇನೆ ಸದಾ ಸಿದ್ಧ

ಕಾರ್ಯಕ್ರಮದ ನಡುವೆ ಮಾತನಾಡಿ ಭೂಸೇನಾ ಮುಖ್ಯಸ್ಥ ಬಿಪಿನ್‍ರಾವತ್ ಅವರು ಭಾರತೀಯ ಸೇನೆ ಎಲ್ಲಾ ರೀತಿಯಲ್ಲೂ ಸರ್ವಶಕ್ತವಾಗಿದೆ. ಶತ್ರುಗಳ, ಉಗ್ರವಾದಿಗಳ ದೇಶದ ಸುಭದ್ರತೆಯನ್ನು ಕದಡುವ ಪ್ರಯತ್ನವನ್ನು ಹತ್ತಿಕ್ಕುವಲ್ಲಿ ಸೇನೆ ಸರ್ವ ಸನ್ನದ್ಧವಾಗಿರುತ್ತದೆ ಎಂಬ ಸಂದೇಶವನ್ನು ನೀಡಿದರು.

ಈ ಬಾರಿ ಗೋಣಿಕೊಪ್ಪಲುವಿನಲ್ಲೂ ಆಚರಣೆ

ಭಾರತದ ರಕ್ಷಣಾ ಪಡೆಗೆ ಇಬ್ಬರು ಜನರಲ್‍ಗಳನ್ನು ನೀಡಿರುವ ಖ್ಯಾತಿ ಕೊಡಗು ಜಿಲ್ಲೆಯದ್ದು. ಇದರೊಂದಿಗೆ ಅದೆಷ್ಟೋ ಸೈನ್ಯಾಧಿಕಾರಿಗಳು, ಸೈನಿಕರು ದೇಶಕ್ಕೆ ಕೊಡುಗೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್‍ಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಪದ್ಮಭೂಷಣ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಗಳನ್ನು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಮೈದಾನದ ಬಳಿ ಸ್ಥಾಪಿಸಿದೆ. ಇದೀಗ ಈ ಬಾರಿ ಇದೇ ಪ್ರಥಮ ಬಾರಿ ಎಂಬಂತೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‍ಸಿಸಿ ಘಟಕದಿಂದ ನಿನ್ನೆ ಸೇನಾ ದಿನಾಚರಣೆಯನ್ನು ವೀರಸೇನಾನಿಗಳ ಪ್ರತಿಮೆ ಎದುರು ಆಚರಿಸಲಾಗಿದೆ.

ಇಬ್ಬರು ಮಹಾನ್ ನಾಯಕರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಹುತಾತ್ಮ ಯೋಧರಿಗೆ ಗೌರವ ಸೂಚಿಸಿದ ಎನ್‍ಸಿಸಿ ಕೆಡೆಟ್‍ಗಳು ಹಾಗೂ ಕಾಲೇಜಿನ ಪ್ರಮುಖರು ಭಾರತ್ ಮಾತಾಕಿ ಜೈ... ಜೈ... ಇಂಡಿಯನ್ ಆರ್ಮಿ... ವಂದೇ ಮಾತರಂ ಘೋಷಣೆಗಳೊಂದಿಗೆ ಜಿಲ್ಲೆಯಲ್ಲಿಯೂ ಸೇನಾ ದಿನಾಚರಣೆಯ ಮೂಲಕ ಇತರರಿಗೆ ಪ್ರೇರಣೆಯಾಗುವಂತಹ ಪ್ರಯತ್ನಕ್ಕೆ ಮುಂದಾಗಿದ್ದು, ವಿಶೇಷವಾಗಿದೆ. ಈ ಸಂದರ್ಭ ಎನ್‍ಸಿಸಿ ವಿದ್ಯಾರ್ಥಿಗಳೊಂದಿಗೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಆರ್. ಉಷಾಲತಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಎನ್‍ಸಿಸಿ ಅಧಿಕಾರಿ ಎಂ.ಆರ್. ಅಕ್ರಂ ಮತ್ತಿತರರು ಪಾಲ್ಗೊಂಡಿದ್ದರು.

ಫೀ.ಮಾ. ಕಾರ್ಯಪ್ಪ ಕಾಲೇಜು ಮುಂದಾಗಲಿ

ಸೇನಾದಿನದ ಮಹತ್ವದ ಬಗ್ಗೆ ಪ್ರತಿಕ್ರಿಯಿಸಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಕಾವೇರಿ ಕಾಲೇಜಿನ ಮಕ್ಕಳ ಚಿಂತನೆ ಉತ್ತಮವಾಗಿದೆ ಎಂದಿದ್ದಾರೆ. ಇಡೀ ದೇಶದಲ್ಲಿ ಫೀ.ಮಾ. ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ ದಿನದಂದು ಸೇನಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅವರದ್ದೇ ಹೆಸರಿನಲ್ಲಿರುವ ಮಡಿಕೇರಿಯ ಎಫ್‍ಎಂಕೆಎಂಸಿ ಕಾಲೇಜಿನ, ಎನ್‍ಸಿಸಿ ಘಟಕವೂ ಮುಂದಿನ ವರ್ಷದಿಂದ ಇದಕ್ಕೆ ಮುಂದಾಗಲಿ. ಇದು ಯುವಕರು ದೇಶದ ರಕ್ಷಣಾ ಪಡೆಗೆ ಸೇರಲು ಪ್ರೇರಣೆಯಾದಂತಾಗುತ್ತದೆ ಎಂದು ಅವರು ನುಡಿದರು.

- ಶಶಿ ಸೋಮಯ್ಯ