ಸೋಮವಾರಪೇಟೆ, ಜ. 14: ಪ್ರಕರಣವೊಂದರಲ್ಲಿ ಆರೋಪಿ ಜಾಮೀನು ಪಡೆಯುವ ಸಂದರ್ಭ ಬೇರೋರ್ವರ ಆರ್‍ಟಿಸಿಯನ್ನು ವಕೀಲರ ಎದುರು ಹಾಜರುಪಡಿಸಿದ್ದು, ಪ್ರಮಾಣ ಪತ್ರವನ್ನು ಗುರುತಿಸಿಕೊಟ್ಟ ವಕೀಲ ಮನೋಹರ್ ವಿರುದ್ಧ ನ್ಯಾಯಾಲಯದ ಆದೇಶದ ಮೇರೆ ಸೋಮವಾರಪೇಟೆ ಪೊಲೀಸರು ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಆರೋಪಿ ಪ್ರದೀಪ್ ಎಂಬಾತನಿಗೆ ಜಾಮೀನು ನೀಡುವ ಸಂದರ್ಭ ಬೇರೋರ್ವರ ಆರ್‍ಟಿಸಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದ್ದು, ಆರೋಪಿ ಪ್ರದೀಪ್ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ, ಜಾಮೀನುದಾರರ ಆಸ್ತಿ ಮುಟ್ಟುಗೋಲಿಗೆ ನ್ಯಾಯಾಧೀಶರು ಆದೇಶಿಸಿದ್ದರು.
ಈ ಸಂದರ್ಭ ಆರ್‍ಟಿಸಿ ಬೇರೋರ್ವರ ಹೆಸರಿನಲ್ಲಿ ಇರುವದು ಕಂಡುಬಂದಿದ್ದು, ಖಾತೆದಾರರು ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಆಸ್ತಿಯ ದಾಖಲೆಗಳನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ಗುರುತಿಸಿಕೊಟ್ಟ ವಕೀಲ ಮನೋಹರ್ ಮೇಲೆ ನ್ಯಾಯಾಲಯದ ಸೂಚನೆ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಮನೋಹರ್ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆ ಮೇರೆಗೆ ಹೈಕೋರ್ಟ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ವಕೀಲ ಬಿ.ಎಸ್. ಸಚಿನ್ ತಿಳಿಸಿದ್ದಾರೆ.