ವೀರಾಜಪೇಟೆ, ಜ. 16: ಸರ್ಕಾರಿ ಆಸ್ಪತ್ರೆಯಲ್ಲಿ ಸಪಾಯಿ ಕರ್ಮಚಾರಿ, ಇನ್ನಿತರ ಡಿ ಗ್ರೂಪ್ ನೌಕರರಿಗೆ ಮಾಸಿಕ ವೇತನ ಪಾವತಿಯಲ್ಲಿ ತಾರತಮ್ಯವೆಸಗಲಾಗುತ್ತಿದೆ ಎಂದು ಗುತ್ತಿಗೆ ಕಾರ್ಮಿಕರು ಸರ್ಕಾರಿ ಅಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.
ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ 5 ವರ್ಷಗಳಿಂದ ಡಿ ಗ್ರೂಪ್ ಕೆಲಸಗಳಿಗೆ ನೌಕರನ್ನು ನೇಮಿಸಿಕೊಂಡು ಗುತ್ತಿಗೆ ಪಡೆದ ಕಂಪನಿಯು ವೇತನ ಪಾವತಿಯಲ್ಲಿ ವಿಳಂಬ ಮಾಡುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯ 35 ಮಂದಿ ಗುತ್ತಿಗೆ ಆದಾರಿತ ನೌಕರರು ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಪ್ರತಿಭಟನೆ ಮಾಡಿದರು.
ಕಾರ್ಮಿಕ ಮುಖಂಡ ಭರತ್ ಮಾತನಾಡಿ, ಸರ್ಕಾರವು ಸರ್ಕಾರಿ ಸಂಸ್ಥೆಗಳ ಕೆಲಸ ಕಾರ್ಯಗಳ ನಿರ್ವಹಣೆಯನ್ನು ಗುತ್ತಿಗೆ ಆದಾರದ ಮೇಲೆ ಖಾಸಗಿ ಕಂಪೆನಿಗಳಿಗೆ ವಹಿಸಿದ್ದು ಕಂಪೆನಿಗಳು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಸಮಯಕ್ಕೆ ವೇತನ ಪಾವತಿ ಮಾಡದೇ ಕಾರ್ಮಿಕರಿಗೆ ಹಿಂಸೆ ನೀಡಲಾಗುತ್ತಿದೆ. ಒಂದು ಬಾರಿ ತಿಂಗಳ ಕೊನೆಯಲ್ಲಿ ಮತ್ತೊಂದು ಬಾರಿ ತಿಂಗಳ ಮಧ್ಯದಲ್ಲಿ ವೇತನ ನೀಡುತ್ತಿದ್ದು ಕಾರ್ಮಿಕರು ಮಾನಸಿಕವಾಗಿ ನೊಂದು ಅರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಗುತ್ತಿಗೆದಾರರು 9 ಮಂದಿ ನೌಕರರಿಗೆ ಒಂದು ನಯಾ ಪೈಸೆ ಪಿ.ಎಫ್. ಹಣ ಬ್ಯಾಂಕ್ ಖಾತೆಗೆ ಸಂದಾಯ ಮಾಡಿರುವದಿಲ್ಲ. ಇದು ಕೂಡ ಒಂದು ರೀತಿಯ ಮಾಫಿಯ. ಗುತ್ತಿಗೆ ಕಂಪೆನಿಯು ಕೆಲವು ತಿಂಗಳ ಹಿಂದೆ ಇದೇ ರೀತಿ ಮಾಡಿದೆ. ಇದೀಗ ಹಳೆ ಚಾಳಿಯನ್ನು ಮುಂದುವರಿಸಿದೆ. ನೌಕರರ ವೇತನವನ್ನು ಕಾನೂನು ಬದ್ಧವಾಗಿ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಗುತ್ತಿಗೆ ಆದಾರದಲ್ಲಿ ನಿಯೋಜನೆಗೊಂಡ 35 ನೌಕರರು ಪಾಲ್ಗೊಂಡಿದ್ದರು.