ವೀರಾಜಪೇಟೆ, ಜ. 16: ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮ, ಸಮಾಜ, ಸಂಘ, ಸಂಸ್ಥೆಗಳು ಸ್ಪಂದಿಸಿದ ರೀತಿಯನ್ನು ಅಭಿನಂದಿಸುತ್ತೇವೆ. ಆದರೆ ಆ ನಂತರದ ದಿನಗಳಲ್ಲಿ ಪರಿಹಾರ ಕಾರ್ಯಗಳು ಕುಂಟುತ್ತಾ ಸಾಗುತ್ತಿದ್ದು ಸಂತ್ರಸ್ತರ ಬಗ್ಗೆ ನಿರ್ಲಕ್ಷಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಎಲ್ಲ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸದಿದ್ದರೆ ಕೊಡಗಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವದು ಸರಕಾರದ ಈ ನಿರ್ಲಕ್ಷ್ಯದ ಧೋರಣೆಯನ್ನು ಅಖಿಲ ಕೊಡವ ಸಮಾಜ ಖಂಡಿಸುತ್ತಿದೆ ಎಂದು ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಣ್ಣಪ್ಪ ಅವರು ಪ್ರಕೃತಿ ವಿಕೋಪದ ದುರಂತ ಉಂಟಾಗಿ ಐದು ತಿಂಗಳುಗಳೇ ಕಳೆದಿದ್ದು ಸಂತ್ರಸ್ತರಿಗೆ ತಾತ್ಕಾಲಿಕ ರೂ. 3800 ತುರ್ತು ಪರಿಹಾರದ ಕಿಟ್ ಹೊರತು ಪಡಿಸಿದರೆ ಯಾವದೇ ಪರಿಹಾರ ಒದಗಿಸಿಲ್ಲ. ಇದು ಸರ್ಕಾರದ ವೈಫಲ್ಯತೆಯನ್ನು ತೋರಿಸುತ್ತದೆ. ಕೇವಲ ಮನೆ ಕಳೆದು ಕೊಂಡವರಿಗಷ್ಟೆ ಮನೆಕಟ್ಟಿ ಕೊಡುವ ಕಾರ್ಯ ಪ್ರಗತಿಯಲ್ಲಿದ್ದು, ಆಸ್ತಿ ಪಾಸ್ತಿ, ತೋಟ, ಬೆಳೆಗಳನ್ನು ಕಳೆದುಕೊಂಡು ಸಂತ್ರಸ್ತರು ಬದುಕಲು ದಾರಿ ತೋಚದೆ ಕಂಗಾಲಾಗಿದ್ದಾರೆ. ಅಳಿದುಳಿದ ಬೆಳೆಗಳನ್ನು ರೈತಾಪಿ ಸಂತ್ರಸ್ತರು ಕೊಯ್ಲು ಮಾಡಿದ್ದಾರೆ. ದುರಂತದಿಂದ ಕುಸಿದ ಭೂಮಿಯಲ್ಲೀ ಈಗಾಗಲೆÉೀ ಕಾಡು ಗಿಡ ಗಂಟಿಗಳು ಬೆಳೆದು ಮೇಲ್ನೋಟಕ್ಕೆ ಏನೂ ನಡೆದೇ ಇಲ್ಲ ಎನ್ನುವಂತೆ ಗೋಚರಿಸುತ್ತಿದೆ. ಕಂದಾಯ ಇಲಾಖಾಧಿಕಾರಿಗಳು ಮಾತ್ರ ಇನ್ನೂ ಕೂಡ ಸರ್ವೆ ಕಾರ್ಯಗಳನ್ನೇ ಮಾಡುತ್ತಿರುವ ನಾಟಕವಾಡುತ್ತಿದ್ದಾರೆ. ಸರ್ಕಾರ ದಿಡ್ಡಳ್ಳಿ ವಿಚಾರದಲ್ಲಿ ಯಾವ ರೀತಿ ಸ್ಪಂದಿಸಿತು ಅದೇ ರೀತಿ ಉತ್ತರ ಕೊಡಗಿನಲ್ಲಿ ಪ್ರಕೃತಿ ವಿಕೋಪದಲ್ಲಿ ತುತ್ತಾದವರಿಗೂ ಸ್ಪಂದಿಸಬೇಕು ಎಂದು ಹೇಳಿದರು.

ಕಾರ್ಯಾಧ್ಯಕ್ಷ ಇಟ್ಟಿರ ಬಿದ್ದಪ್ಪ ಮಾತನಾಡಿ ಕೊಡಗಿಗಾದ ಪ್ರಾಕೃತಿಕ ವಿಕೋಪವನ್ನು ತಮಗಾದ ನೋವೆಂದು ಭಾವಿಸಿ, ಕರ್ನಾಟಕವೇ ಅಲ್ಲದೇ, ದೇಶದ ಮೂಲೆ ಮೂಲೆಯಿಂದ ಲೆಕ್ಕವಿಲ್ಲದಷ್ಟು ಪರಿಹಾರ ಸಾಮಗ್ರಿಗಳು ಹಾಗೂ ಅನುದಾನ ಹರಿದು ಬಂದಿದೆ. ಸರ್ಕಾರ ಕೂಡ ಸಾಕಷ್ಟು ಅನುದಾನ ನೀಡುವದಾಗಿ ಭರವಸೆ ನೀಡಿತ್ತು, ಆದರೆ ಈ ಎಲ್ಲ ಅನುದಾನ ಹಾಗೂ ಸಾಮಾಗ್ರಿಗಳು ಏನಾಯಿತು ಎನ್ನುವದೇ ಈಗಿನ ಯಕ್ಷಪ್ರಶ್ನೆ. ಮಾಹಿತಿಯ ಪ್ರಕಾರ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಕೊಡಗಿಗಾಗಿ ಪ್ರತ್ಯೇಕವಾಗಿ ನೂರಕ್ಕೂ ಅಧಿಕ ಕೋಟಿ ಪರಿಹಾರ ಹಣ ಹರಿದು ಬಂದಿದೆ, ಕೇಂದ್ರ ಸರ್ಕಾರ ಈಗಾಗಲೇ ತನ್ನ ಪಾಲಿನ 540 ಕೋಟಿ ರೂ. ಘೋಷಿಸಿದೆ, ಜಿಲ್ಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಖಾಸಗಿ ಸಂಘ ಸಂಸ್ಥೆಗಳಿಂದ ಪ್ರತ್ಯೇಕ ಅನುದಾನ ಬಂದಿದೆ, ಆದರೂ ಸರ್ಕಾರ ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಿಲ್ಲವೆಂದರೆ, ಇದು ಮಲತಾಯಿ ಧೋರಣೆಯಲ್ಲದೆ ಮತ್ತೇನು..? ಸರ್ಕಾರ ಕೊಡಗಿನ ಜನತೆಯ ತಾಳ್ಮೆಯನ್ನು ಪರೀಕ್ಷಿಸದೇ ಕೂಡಲೇ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂದಿಸಿ, ನಮ್ಮ ಬೇಡಿಕೆಗಳಿಗೆ ಉತ್ತರಿಸಬೇಕೆಂದು ಆಗ್ರಹಿಸಿದರು. ಸರ್ಕಾರ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಅನುಮತಿ ನೀಡಿರುವದನ್ನು ಅಖಿಲ ಕೊಡವ ಸಮಾಜ ಸ್ವಾಗತಿಸಿದೆ ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.

ಖಜಾಂಚಿ ಮಂಡೆಪಂಡ ಸುಗುಣ ಮುತ್ತಣ್ಣ ಮಾತನಾಡಿ ಸರ್ಕಾರ ಪರಿಹಾರ ಕಾರ್ಯದಲ್ಲಿ ವಿಳಂಬ ಧೋರಣೆಗೆ ಕಾರಣವೇನು. ಸಂತ್ರಸ್ತರ ಪರಿಹಾರಕ್ಕಾಗಿ ಬಂದಿರುವ ಟನ್ನುಗಟ್ಟಲೆ ಸಾಮಗ್ರಿಗಳು ಇನ್ನೂ ವಿತರಣೆಯಾಗದೆ ದಾಸ್ತಾನು ಕೊಠಡಿಯಲ್ಲಿದೆ. ಸರ್ಕಾರ ಮನೆ ಕಳೆದುಕೊಂಡವರ ಮೊದಲ ಪಟ್ಟಿಯನ್ನೇ ತಯಾರಿಸಿದ್ದು, ಇತರೆ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿರುವವರ ಪಟ್ಟಿ ಇನ್ನೂ ತಯಾರಾಗಿಲ್ಲ. ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಇದುವರೆಗೂ ಬಂದಿರುವ ಒಟ್ಟು ಅನುದಾನದ ಮೊತ್ತ., ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ಪರಿಹಾರ ಧನದ ಮೊತ್ತ. ಅದರಲ್ಲಿ ಕೊಡಗಿನ ಪಾಲೆಷ್ಟು ಎಂಬುದನ್ನು ಸರ್ಕಾರ ಬಹಿರಂಗ ಪಡಿಸಬೇಕಿದೆ. ಕೇಂದ್ರ ಸರ್ಕಾರದಿಂದ ಘೋಷಿಸಿದ 540 ಕೋಟಿಯಲ್ಲಿ ಹಂಚಿಕೆ ಕಾರ್ಯ ಹೇಗೆ. ಅದರಲ್ಲಿ ಜಿಲ್ಲೆಗೆ ಎಷ್ಟು ಪಾಲು ನೀಡಲಾಗುತ್ತದೆ ಕೊಡಗಿನ ಮೂಲ ನಿವಾಸಿಗಳು ತಲ ತಲಾಂತರದಿಂದ ಜಮ್ಮ ಹಾಗೂ ಜಂಟಿ ಖಾತೆಯ ಭೂ ದಾಖಲಾತಿ ಹೊಂದಿರುವದರಿಂದ, ಕಂದಾಯ ದಾಖಲಾತಿಯಲ್ಲಿ ಒಬ್ಬರ ಹೆಸರಿಲ್ಲಿದ್ದರೂ, ಕೃಷಿ ಬೆಳೆಗಳನ್ನು ಪ್ರತ್ಯೇಕವಾಗಿ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಪರಿಹಾರ ವಿತರಣೆಯಲ್ಲಿ ತಾಂತ್ರಿಕ ಅಡಚಣೆಯಾಗುವ ಸಂಭವವಿದ್ದು, ಈ ಗೊಂದಲ ನಿವಾರಣೆಗೆ ಸರ್ಕಾರವು ಇದನ್ನು ವೀಶೇಷ ಪ್ರಕರಣವೆಂದು ಪರಿಗಣಿಸಿ, ಪ್ರತಿ ರೈತ ಕುಟುಂಬವನ್ನು ಗುರುತಿಸಿ ಕುಟುಂಬವಾರು ಪರಿಹಾರ ವಿತರಿಸಬೇಕು. ಕೊಡಗಿನ ಜನ ಎಂದಿಗೂ ಶಾಂತಿ ಪ್ರಿಯರು, ಅದನ್ನೇ ನಮ್ಮ ದೌರ್ಬಲ್ಯ ಎಂದು ತಿಳಿದುಕೊಂಡರೆ ಅದು ಸರ್ಕಾರದ ಮೂರ್ಖತನ ಎಂದು ದೂರಿದರು.

ಗೋಷ್ಠಿಯಲ್ಲಿ ಉಪಾದ್ಯಕ್ಷ ಅಜ್ಜಿಕುಟ್ಟಿರ ಮಾದಯ್ಯ ಸುಬ್ರಮಣಿ, ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಂಟಿ ಕಾರ್ಯದರ್ಶಿ ನಂದೆಟ್ಟಿರ ರಾಜಾ ಮಾದಪ್ಪ, ನಿರ್ದೇಶಕರುಗಳಾದ ಮೂವೇರ ರೇಖಾ ಪ್ರಕಾಶ್, ಚಾಮೇರ ದಿನೇಶ್ ಉಪಸ್ಥಿತರಿದ್ದರು.