ಮಡಿಕೇರಿ, ಜ. 16: ಕೊಡಗು ಜಿಲ್ಲಾಮಟ್ಟದ ಯುವಜನ ಮೇಳ ತಾ. 20 ರಂದು ಗಾಳಿಬೀಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳು, ಗಾಳಿಬೀಡು ಶ್ರೀ ಮಹಾಗಣಪತಿ ಸೇವಾ ಸಮಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಳಿಬೀಡು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮತ್ತು ಗಾಳಿಬೀಡು ಯುವಕ ಸಂಘದ ಸಹಯೋಗದಲ್ಲಿ ತಾ. 20 ರಂದು ಬೆಳಗಿನಿಂದ ಸಂಜೆಯವರೆಗೆ ಯುವ ಜನರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ನುಡಿದರು. ಯುವಜನ ಮೇಳದಲ್ಲಿ ಯುವಕ ಯುವತಿಯರಿಗೆ ಭಾವಗೀತೆ (3 ನಿಮಿಷ), ಲಾವಣಿ (4ನಿಮಿಷ), ರಂಗಗೀತೆ (3 ನಿಮಿಷ) ಹಾಗೂ ಏಕಪಾತ್ರಾಭಿನಯ (5 ನಿಮಿಷ)ದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಗೀಗಿಪದ (5ಜನ-4ನಿಮಿಷ), ಕೋಲಾಟ (12ಜನ-6ನಿಮಿಷ), ಜಾನಪದ ನೃತ್ಯ(12 ಜನ-10 ನಿಮಿಷ) ಭಜನೆ (8 ಜನ-10 ನಿಮಿಷ) ಜನಪದ ಗೀತೆ (6 ಜನ-4 ನಿಮಿಷ) ಗುಂಪು ಸ್ಪರ್ಧೆಗಳು ನಡೆಯಲಿದ್ದು, ಯುವತಿಯರಿಗಾಗಿಯೇ ಜೋಳ-ರಾಗಿ ಬೀಸುವ ಪದ (2 ಮಂದಿ-3 ನಿಮಿಷ) ಹಾಗೂ ಸೋಬಾನೆ ಪದ (4ಮಂದಿ- 5 ನಿಮಿಷ) ಸ್ಪರ್ಧೆಗಳು ಜರುಗಲಿವೆ. ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳು ಫೆಬ್ರವರಿಯಲ್ಲಿ ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಯುವ ಜನರು 15 ವರ್ಷದಿಂದ 45 ವರ್ಷದ ಒಳಗಿನವರಾಗಿದ್ದು, ಯುವಕ-ಯುವತಿ ಮಂಡಳಿ ಮತ್ತು ಮಹಿಳಾ ಮಂಡಳಿಯ ಸದಸ್ಯರಾಗಿ ರಬೇಕು. ಜಾನಪದ ಶೈಲಿಯ ಸ್ಪರ್ಧೆಗಳಲ್ಲಿ ಭಾಗವಹಿಸುವಾತ ಜಾನಪದ ಶೈಲಿಯ ಉಡುಗೆತೊಡುಗೆ ಯನ್ನೇ ಬಳಸಬೇಕು ಮತ್ತು ಹಾಡುಗಳಿಗೆ ಯಾವದೇ ಕ್ಯಾಸೆಟ್ ಬಳಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರಲ್ಲದೆ, ಭಾಗವಹಿಸು ವವರು ತಾ. 20 ರಂದು ಬೆಳಿಗ್ಗೆ 9.30 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿ ಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಮಾತನಾಡಿ, ಅಂದು ಬೆಳಿಗ್ಗೆ 10.30 ಗಂಟೆಗೆ ಯುವಜನ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಚಾಲನೆ ನೀಡಲಿದ್ದು, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ.

ಯುವ ಭವನ ಬೇಕು

ಜಿಲ್ಲೆಯ ಯುವಜನರ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯುವಭವನ ನಿರ್ಮಾಣ ವಾಗಿದ್ದರೂ, ಅಲ್ಲಿ ಪ್ರಸಕ್ತ ಮಹಿಳಾ ಕಾಲೇಜು ಕಾರ್ಯನಿರ್ವಹಿ ಸುತ್ತಿರುವ ದರಿಂದ ಯುವ ಒಕ್ಕೂಟದ ಚಟುವಟಿಕೆ ಗಳಿಗೆ ತೊಂದರೆ ಯಾಗುತ್ತಿದೆ. ಯುವ ಭವನವನ್ನು ಒಕ್ಕೂಟಕ್ಕೆ ಬಿಟ್ಟುಕೊಡು ವಂತೆ ಹಲವು ವರ್ಷಗಳಿಂದ ಮನವಿ ಮಾಡಲಾಗು ತ್ತಿದ್ದರೂ, ಅದಕ್ಕೆ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಒಕ್ಕೂಟದ ಜಿಲ್ಲಾಧ್ಯಕ್ಷ ಸುಕುಮಾರ್, ಮುಂದಿನ ದಿನಗಳಲ್ಲಿ ಈ ಸಂಬಂಧ ತೀವ್ರ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ಗಣೇಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ದಿಲೀಪ್ ಹಾಗೂ ಗಾಳಿಬೀಡು ಯುವಕ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.